ವರದಿ : ವಿಶ್ವನಾಥ ಪಂಜಿಮೊಗರು
ಮಂಗಳೂರು: ತುಳುಭಾಷೆಯ ಬೆಳವಣಿಗೆ ಹಾಗೂ ತುಳುಲಿಪಿಯ ಸರ್ವವ್ಯಾಪಿಗೆ ಸಾಕಷ್ಟು ಕೊಡುಗೆ ನೀಡಿರುವ ಜೈ ತುಳುನಾಡು ಸಂಘಟನೆ ಇದೀಗ ಮಹತ್ತರವಾದ ಹೆಜ್ಜೆಯನ್ನಿರಿಸುವ ಮೂಲಕ ತುಳುಲಿಪಿಯನ್ನು ದೇಶಾದ್ಯಂತ ಗುರುತಿಸಲು ಹೊರಟಿದೆ.
ಈ ಮೂಲಕ ತುಳುಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವಲ್ಲಿ, ರಾಜ್ಯದ ಅಧಿಕೃತ ಭಾಷೆಯನ್ನಾಗಿ ಘೋಷಿಸುವಂತೆ ಹಕ್ಕೊತ್ತಾಯವನ್ನು ಮಾಡುತ್ತಿದೆ.
ಹೌದು ಜೈ ತುಳುನಾಡು ಸಂಘಟನೆ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಸಾವಿರಾರು ಮಂದಿಗೆ ತುಳುಲಿಪಿಯನ್ನು ಕಲಿಸುವ ಮೂಲಕ ಭಾಷೆಯ ಬೆಳವಣಿಗೆಗೆ ಕೊಂಡಿಯಾಗಿತ್ತು. ಇದೀಗ ತುಳುಲಿಪಿಯಲ್ಲಿಯೇ 'ತುಳುಪುರ್ಪ'ವೆಂಬ ಕವಿತೆ ಪುಸ್ತಕವನ್ನು ಪ್ರಕಟಿಸಿದೆ. ಅದರಲ್ಲೇನು ದೊಡ್ಡದು ಎಂದು ಎಲ್ಲರೂ ಅಂದುಕೊಳ್ಳಬಹುದು. ಆದರೆ ಈ ಪುಸ್ತಕವನ್ನು ದೇಶದ ಪ್ರಧಾನಿ, ರಾಷ್ಟ್ರಪತಿ, ಗೃಹಮಂತ್ರಿ ಹಾಗೂ 30 ರಾಜ್ಯಗಳ ಸಿಎಂಗಳಿಗೆ ಕಳುಹಿಸಲಾಗುತ್ತದೆ. ಅಲ್ಲದೆ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಯ ಜನಪ್ರತಿನಿಧಿಗಳಿಗೆ ನೇರವಾಗಿ ಕೊಡುವ ಯೋಜನೆಯನ್ನು ಜೈ ತುಳುನಾಡು ಸಂಘಟನೆ ಯೋಜನೆ ಹಾಕಿಕೊಂಡಿದೆ.
ಇದರೊಂದಿಗೆ ತುಳು ಭಾಷೆಗೆ ಯಾಕೆ ಮಾನ್ಯತೆ ಕೊಡಬೇಕೆಂಬ ಬಗ್ಗೆ ಸವಿವರವಾದ ಮನವಿ ಪತ್ರವನ್ನು ನೀಡಲಾಗುತ್ತದೆ. ಈ ಮೂಲಕ ದೇಶಾದ್ಯಂತ ತುಳುಭಾಷೆಯ ಹೋರಾಟದ ಬಗ್ಗೆ ಜಾಗೃತಿ ಮೂಡಿಸಲು ಜೈ ತುಳುನಾಡು ಸಂಘಟನೆ ಸಂಕಲ್ಪ ತೊಟ್ಟಿದೆ. ಇದು ತುಳುಭಾಷೆ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳ್ಳುವ, ರಾಜ್ಯದ ಅಧಿಕೃತ ಭಾಷೆಯನ್ನಾಗಿ ಘೋಷಿಸುವ ಕಾರ್ಯಕ್ಕೆ ಬಲ ನೀಡುವಂತೆ ಆಗಬಹುದು ಎಂಬ ಆಶಾವಾದವನ್ನು ಜೈ ತುಳುನಾಡು ಸಂಘಟನೆ ಹೊಂದಿದೆ. ಈ ಆಶಾವಾದವು ನಿಜವಾಗಲೆಂಬುದು ಪಬ್ಲಿಕ್ ನೆಕ್ಸ್ಟ್ ಆಶಯ.
PublicNext
25/08/2022 11:02 pm