ವರದಿ: ರಹೀಂ ಉಜಿರೆ
ಉಡುಪಿ: ರಾಜ್ಯದ ದ್ವಿತೀಯ ಪಿಯುಸಿ ಫಲಿತಾಂಶ ಇಂದು ಪ್ರಕಟವಾಗಿದೆ. ಎಸೆಸೆಲ್ಸಿ ಪರೀಕ್ಷೆಯಲ್ಲಿ ಬಡವರ ಮಕ್ಕಳೇ ಸಾಧನೆ ಮಾಡಿದ್ದರು. ಪಿಯುಸಿಯಲ್ಲೂ ಇದು ಮುಂದುವರೆದಿದೆ. ಉಡುಪಿಯಲ್ಲಿ ಹಪ್ಪಳ ತಯಾರಿಸಿ ಜೀವನ ನಿರ್ವಹಿಸುತ್ತಿರುವ ನಾರಾಯಣ ನಾಯಕ್ ಅವರ ಪುತ್ರಿ ಭವ್ಯಾ ನಾಯಕ್ ರಾಜ್ಯಕ್ಕೇ ದ್ವಿತೀಯ ಸ್ಥಾನ ಗಳಿಸುವ ಮೂಲಕ ಅಮೋಘ ಸಾಧನೆ ಮಾಡಿದ್ದಾರೆ.
ಹಪ್ಪಳ ಮಾರಾಟ ಮಾಡಿ ಜೀವನ ಸಾಗಿಸುವ ನಾರಾಯಣ ನಾಯಕ್ ಪುತ್ರಿ ಭವ್ಯ ನಾಯಕ್ ಉಡುಪಿಯ ಪುತ್ತೂರು ನಿವಾಸಿ. ಪೂರ್ಣಪ್ರಜ್ಞಾ ಪಿಯು ಕಾಲೇಜಿನ ವಿದ್ಯಾರ್ಥಿನಿಯಾಗಿರುವ ಈಕೆ 600 ರಲ್ಲಿ 597 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ದ್ವಿತೀಯ ಸ್ಥಾನಿಯಾಗಿದ್ದಾಳೆ. ಒಟ್ಟು 5 ವಿಷಯಗಳಲ್ಲಿ 100 ಕ್ಕೆ 100 ಅಂಕ ಸಾಧಿಸಿರುವ ಈಕೆ ಇಂಗ್ಲಿಷ್ ನಲ್ಲಿ ಮಾತ್ರ 3 ಅಂಕ ಕಡಿಮೆ ಪಡೆದಿದ್ದಾಳೆ. ಉತ್ತಮ ಅಂಕದೊಂದಿಗೆ ರಾಜ್ಯಕ್ಕೆ ದ್ವಿತೀಯ ಸ್ಥಾನಿಯಾಗಲು ಪೋಷಕರು ಮತ್ತು ಕಾಲೇಜಿನ ಉಪನ್ಯಾಸಕರು ನೀಡಿದ ಪ್ರೋತ್ಸಾಹ ಹಾಗೂ ಸಹಾಯ ಕಾರಣ ಎನ್ನುತ್ತಾಳೆ ಭವ್ಯಾ. ಓದಲು ಯಾವುದೇ ಟೈಮ್ ಟೇಬಲ್ ಇತ್ಯಾದಿ ಬಳಸದೆ, ನೇರ ವಿಷಯವನ್ನು ಗ್ರಹಿಸಿ ಮನವರಿಕೆ ಮಾಡಿಕೊಂಡರೆ ಉತ್ತಮ ಅಂಕ ಪಡೆಯಬಹುದು ಎನ್ನುತ್ತಾರೆ ಈ ಸಾಧಕಿ.
ನಾರಾಯಣ ನಾಯಕ್- ಉಮಾ ದಂಪತಿಗೆ ಇಬ್ಬರು ಹೆಣ್ಣುಮಕ್ಕಳು. ಹಿರಿಮಗಳು ಪವಿತ್ರಾ ನಾಯಕ್ ಇಂಜಿನಿಯರ್. ತಂದೆ ಕಷ್ಟ ಪಟ್ಟು ಇಬ್ಬರು ಹೆಣ್ಣು ಮಕ್ಕಳನ್ನು ಓದಿಸಿದ್ದಾರೆ. ಇದೀಗ ಮಗಳ ಸಾಧನೆಯಿಂದ ತಂದೆ ತುಂಬಾ ಖುಷಿಗೊಂಡಿದ್ದಾರೆ. ಹಿಂದೆಲ್ಲ ತುಂಬಾ ಕಷ್ಟ ಇತ್ತು. ಜೊತೆಗೆ ಖುಷಿಯೂ ಇತ್ತು. ಈಗ ಖುಷಿ ದುಪ್ಪಟ್ಟಾಗಿದೆ.
ಮಗಳ ಇಚ್ಛೆಯಂತೆ ಆಕೆಯ ಓದು ಮುಂದುವರೆಸುತ್ತೇವೆ ಎಂದು ಹೇಳಿದ್ದಾರೆ.
ಮುಂದೆ ಕಂಪ್ಯೂಟರ್ ಸೈನ್ಸ್ ಶಿಕ್ಷಣ ಪಡೆಯುವ ಇಂಗಿತ ವ್ಯಕ್ತಪಡಿಸಿರುವ ಭವ್ಯ, ಸದ್ಯ ಸಿಇಟಿ ಪರೀಕ್ಷೆ ಬರೆದಿದ್ದು ಅದರಲ್ಲೂ ಉತ್ತಮ ಸಾಧನೆಯ ನಿರೀಕ್ಷೆಯಲ್ಲಿದ್ದಾರೆ. ಈಕೆಗೊಂದು 'ಆಲ್ ದಿ ಬೆಸ್ಟ್' ಹೇಳೋಣ.
Kshetra Samachara
18/06/2022 03:17 pm