ಉಡುಪಿ: ಸಂವಿಧಾನದ ಆಶಯ, ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಮತ್ತು ಹಿರಿಯ ಸಾಹಿತಿಗಳಿಗೆ ವಿರುದ್ಧವಾಗಿ ಪಠ್ಯಪುಸ್ತಕವನ್ನು ರಚಿಸಿರುವ ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಪರಿಷ್ಕರಣಾ ಸಮಿತಿ ಯನ್ನು ವಜಾಗೊಳಿಸಬೇಕು ಮತ್ತು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಕರ್ನಾಟಕ ಭೀಮ್ ಸೇನೆ ಉಡುಪಿ ಜಿಲ್ಲಾ ಘಟಕ ಬುಧವಾರ ಜಿಲ್ಲಾಧಿಕಾರಿ ಕೂರ್ಮಾರಾವ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿತು.
ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿ ಸಂವಿಧಾನ ಆಶಯಗಳಿಗೆ ಅನುಗುಣವಾಗಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು 2005ರ ಅಡಿಯಲ್ಲಿ ಸಾಮಾಜಿಕ ನ್ಯಾಯ, ಲಿಂಗಸಮಾನತೆ, ಪ್ರಾದೇಶಿಕತೆ ಒಳಗೊಳ್ಳುವ ಮೂಲಕ ರಚಿಸಿದ ಪಠ್ಯಗಳನ್ನು ಮಕ್ಕಳು ಕಲಿಯುತ್ತಿದ್ದರು. ಆದರೆ ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ಪರಿಷ್ಕರಿಸಿದ ಪಠ್ಯದಲ್ಲಿ ಅಂಬೇಡ್ಕರ್ರ ಸಂವಿಧಾನ ಶಿಲ್ಪಿ ಎಂಬ ಸಾಲನ್ನು ತೆಗೆದು ಅಂಬೇಡ್ಕರ್ಗೆ ಅವಮಾನ ಮಾಡಲಾಗಿದೆ.
ಬಸವಣ್ಣ, ರಾಷ್ಟ್ರಕವಿ ಕುವೆಂಪು, ನಾರಾಯಣಗುರು, ಟಿಪ್ಪು ಸುಲ್ತಾನ್, ಸಾವಿತ್ರಿ ಬಾಯಿ ಪುಲೆ ಸೇರಿದಂತೆ ಹಲವು ಇತಿಹಾಸವನ್ನು ಪಠ್ಯ ಪುಸ್ತಕದಲ್ಲಿ ತಿರುಚಲಾಗಿದೆ. ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಯ ಸದಸ್ಯರಲ್ಲಿ ಏಳು ಮಂದಿ ಬ್ರಾಹ್ಮಣರಾಗಿದ್ದು, ಇತರೆ ಸಮುದಾಯದ ಒಬ್ಬರೂ ಸದಸ್ಯರಿಲ್ಲ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.
ಆದುದರಿಂದ ಸಂವಿಧಾನ ವಿರೋಧಿ, ದೇಶದ್ರೋಹಿ ರೋಹಿತ್ ಚಕ್ರ ತೀರ್ಥರ ನೇತೃತ್ವದ ಪಠ್ಯ ಪರಿಷ್ಕರಣಾ ಸಮಿತಿಯನ್ನು ವಜಾಗೊಳಿಸಬೇಕು ಮತ್ತು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರ ರಾಜೀನಾಮೆಯನ್ನು ಪಡೆಯಬೇಕು ಎಂದು ಭೀಮ್ ಸೇನೆ ನಿಯೋಗ ಮನವಿಯಲ್ಲಿ ಮುಖ್ಯಮಂತ್ರಿಯನ್ನು ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ಭೀಮ್ ಸೇನೆ ಉಡುಪಿ ಜಿಲ್ಲಾಧ್ಯಕ್ಷೆ ಸುನೀತಾ ಆದಿ ದ್ರಾವಿಡ, ಪ್ರಮುಖರಾದ ಮಂಜುಳಾ, ನಯನ, ಗಾಯತ್ರಿ, ರಾಜೇಶ್ವರಿ, ವಸಂತಿ ಮೊದಲಾದವರು ಉಪಸ್ಥಿತರಿದ್ದರು.
Kshetra Samachara
15/06/2022 04:45 pm