ಮೂಡುಬಿದಿರೆ: ಎಲ್ಲರೂ ಕನ್ನಡ ಮಾತಾನಾಡಲೂ ಸಾಧ್ಯವಿಲ್ಲ. ಕನ್ನಡ ಮಾತಾಡಲೂ ಗಂಡೆದೆ ಬೇಕು. ಕನ್ನಡದ ಬಗ್ಗೆ ಅಪಾರ ಗೌರವಿರಬೇಕು. ಮನೆಯೊಳಗಿನ ಮಾತು ಹಾಗೂ ಮನದೊಳಗಿನ ಮಿಡಿತ ಕನ್ನಡವಾದರೆ ಕನ್ನಡ ಭಾಷೆ ಉಳಿಯಲು ಸಾಧ್ಯ ಎಂದು ಖ್ಯಾತ ಅಂಕಣಗಾರರು ಹಾಗೂ ರಾಜೀವ್ ಗಾಂಧಿ ಆರೋಗ್ಯ ವಿವಿಯ ವಿಶ್ರಾಂತ ನಿರ್ದೇಶಕರಾದ ಡಾ ಕೆಪಿ ಪೂತ್ತೂರಾಯ ತಿಳಿಸಿದರು.
ಅವರು ದಕ್ಷಿಣ ಕನ್ನಡ ಸಾಹಿತ್ಯ ಪರಿಷತ್ತು ಮೂಡುಬಿದಿರೆ ತಾಲೂಕು ಘಟಕ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಜಂಟಿಯಾಗಿ ಆಳ್ವಾಸ್ ಕಾಲೇಜಿನ ವಿಎಸ್ ಆಚಾರ‍್ಯ ಸಭಾಭವನದಲ್ಲಿ ಆಯೋಜಿಸಿದ್ದ- ‘’ಚಿಂತನ ಬೆಳಕು- ತಿಂಗಳ ಚಿಂತನ’’ – ಮಾಸಿಕ ಸರಣಿ ಕಾರ‍್ಯಕ್ರಮವನ್ನು ಉದ್ಘಾಟಿಸಿ ಮಾತಾನಾಡಿದರು.
ಭಾರತದಲ್ಲಿ ಹಿಂದಿ ಮಾತನಾಡುವವರ ಸಂಖ್ಯೆ 60ಕೋಟಿ ಇದ್ದರೂ, ಅದಕ್ಕೆ ಬಂದದ್ದು ಕೇವಲ ಏಳು ಜ್ಞಾನಪೀಠ ಪ್ರಶಸ್ತಿ, ಆದರೆ 6ಕೋಟಿ ಜನ ಮಾತಾಡುವ ಕನ್ನಡ ಭಾಷೆಗೆ ೮ ಜ್ಞಾನಪೀಠ ಪ್ರಶಸ್ತಿ ಬಂದಿದೆ. ಇದು ಕನ್ನಡದ ಹಿರಿಮೆ ಎಂದರು.
ಭೌಗೋಳಿಕವಾಗಿ, ಸಾಹಿತ್ಯಿಕವಾಗಿ, ಆಧ್ಯಾತ್ಮಿಕವಾಗಿ , ಶಿಲ್ಪ ಕಲೆಯಲ್ಲಿ ಕನ್ನಡ ಸಮೃದ್ಧವಾಗಿದೆ. ಆದರೆ ಇಂದು ಆಂಗ್ಲ ಭಾಷೆಯ ವ್ಯಾಮೋಹದಿಂದ ಕನ್ನಡವನ್ನು ಅವಗಣಿಸಲಾಗುತ್ತಿದೆ. ಕನ್ನಡದ ನೆಲ, ಜಲ, ಹೊಲ, ಬೆಳೆಯ ಬಗ್ಗೆ ಅಭಿಮಾನ ತಾಳುವುದರಿಂದ ಕನ್ನಡದ ಋಣವನ್ನು ತೀರಿಸಬಹುದು. ಕನ್ನಡದ ಕೆಲವು ಮೇರು ಬರಹಗಾರರ ಮನೆ ಮಾತು ಕನ್ನಡೇತರವಾಗಿದ್ದರೂ, ಕನ್ನಡ ಸಾಹಿತ್ಯ ಕೃಷಿಯನ್ನು ಯಥೇಚ್ಛವಾಗಿ ಮಾಡಿದರು. ಇದು ಇಂದಿನ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು ಎಂದರು.
ಮೂಡುಬಿದಿರೆ ತಾಲೂಕು ಘಟಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೇಣು ಗೋಪಾಲ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಕನ್ನಡ ಸಾಹಿತ್ಯ ಪರಿಷತ್ತಿನ ಕರ‍್ಯಕಾರಿ ಸಮಿತಿಯ ಸದಸ್ಯ ಹಾಗೂ ಆಳ್ವಾಸ್ ಪದವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ ಯೋಗೀಶ್ ಕೈರೋಡಿ ಕಾರ‍್ಯಕ್ರಮ ನಿರೂಪಿಸಿ, ಕಾರ‍್ಯಕಾರಿ ಸಮಿತಿಯ ಸದಸ್ಯ ಗುರು ಎಂ ಪಿ ವಂದಿಸಿದರು. ಆಳ್ವಾಸ್ ಸಾಂಸ್ಕೃತಿಕ ತಂಡದ ವಿದ್ಯಾರ್ಥಿಗಳು ಪ್ರಾರ್ಥನೆಯನ್ನು ನೆರೆವೇರಿಸಿದರು.
Kshetra Samachara
23/05/2022 09:29 pm