ವಿಶೇಷ ವರದಿ: ರಹೀಂ ಉಜಿರೆ
ಬೆಳ್ಳಂಪಳ್ಳಿ: ಈ ಸರಕಾರಿ ಶಾಲೆ ಅಮೃತ ಮಹೋತ್ಸವ ಕಂಡಿದೆ.ಅಂದರೆ ಸ್ವಾತಂತ್ರ್ಯ ಸಿಕ್ಕಿದ ವರ್ಷವೇ ಹುಟ್ಟಿದ ಶಾಲೆ ಇದು.ಇಲ್ಲಿ ವಿದ್ಯಾಭ್ಯಾಸ ಪಡೆದು ಸತ್ಪ್ರಜೆಗಳಾಗಿ ರೂಪುಗೊಂಡವರಿಗೆ ಲೆಕ್ಕವೇ ಇಲ್ಲ.ಆದರೆ ಈ ಶಾಲೆಯ ಮಕ್ಕಳದ್ದು ಒಂದೇ ಬೇಡಿಕೆ ಎಂದರೆ ,ನಮಗೆ ಟೀಚರ್ ಬೇಕು!
ಹೌದು... ಬೆಳ್ಳಂಪಳ್ಳಿಯ ಜೈ ಹಿಂದ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಬ್ಬೇ ಒಬ್ಬ ಖಾಯಂ ಶಿಕ್ಷಕ ಇಲ್ಲ.ಎಪ್ಪತ್ತಕ್ಕೂ ಹೆಚ್ಚು ಮಕ್ಕಳಿರುವ ಶಾಲೆಯಲ್ಲಿ ಒಬ್ಬೇ ಒಬ್ಬ ಶಿಕ್ಷಕ ಇಲ್ಲ ಎಂದರೆ , ಕನ್ನಡ ಮಾಧ್ಯಮ ಶಾಲೆಗಳು ಯಾವ ಸ್ಥಿತಿಯಲ್ಲಿವೆ ಎಂದು ಗೊತ್ತಾಗುತ್ತದೆ.ಚುರುಕಾದ ,ತುಂಟಾಟದ ಗ್ರಾಮೀಣ ಭಾಗದ ಬಡ ಮಕ್ಜಳೇ ಈ ಶಾಲೆಗೆ ಬರುತ್ತಾರೆ.ಓದಿ ಕಲಿಯುವ ಕುತೂಹಲ ಇವರಲ್ಲಿದೆ.ಆದರೇನು ಮಾಡುವುದು ,ಇಲ್ಲಿದ್ದ ಏಕೈಕ ಶಿಕ್ಷಕಿ ನಿವೃತ್ತಿ ಪಡೆದ ಮೇಲೆ ಇಲ್ಲಿಗೊಬ್ಬ ಖಾಯಂ ಶಿಕ್ಷಕನ ನೇಮಕ ಆಗಿಲ್ಲ.ಹೀಗಾಗಿ ಶಿಕ್ಷಕರ ನೇಮಕಾತಿ ಮಾಡದಿದ್ದರೆ ಮಕ್ಕಳ ಜೊತೆ ಸೇರಿ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ ಗ್ರಾಮಸ್ಥರು ಹೇಳಿದ್ದಾರೆ.
ಸದ್ಯ ಈ ಶಾಲೆಯಲ್ಲಿ 73 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.ಇಷ್ಟೊಂದು ಮಕ್ಕಳು ಇದ್ದರೂ ಶಿಕ್ಷಕರಿಲ್ಲದೇ ಇರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ.ಈ ಮಕ್ಕಳು ಭವಿಷ್ಯದ ಪ್ರಜೆಗಳಾಗಿದ್ದು ಮುಂದೆ ಇಂಜಿನಿಯರ್ ,ಡಾಕ್ಟರ್ ಆಗುವ ಕನಸು ಕಾಣುತ್ತಿದ್ದಾರೆ.ಆದರೆ ಸರಕಾರವು ಈ ಶಾಲೆಯನ್ನು ನಿರ್ಲಕ್ಷ್ಯ ಮಾಡಿದೆ.ಊರವರು ಮತ್ತು ಹಳೆ ವಿದ್ಯಾರ್ಥಿಗಳು ಈ ಸಂಬಂಧ ಎಷ್ಟೇ ಮನವಿ ಮಾಡಿದರೂ ಅಧಿಕಾರಿಗಳು ಸ್ಪಂದಿಸುತ್ತಲೇ ಇಲ್ಲ.ಹೀಗಾಗಿ ಜನಪ್ರತಿನಿಧಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಬ್ಲಿಕ್ ನೆಕ್ಸ್ಟ್ ಕಳೆದ ವಾರ ಹಿರಿಯಡ್ಲ ಸಮೀಪದ ಸರಕಾರಿ ಶಾಲೆಯ ದುಸ್ಥಿತಿಯನ್ನು ಆಡಳಿತದ ಗಮನಕ್ಕೆ ತರುವ ಪ್ರಯತ್ನ ಮಾಡಿತ್ತು.ಇದೀಗ ಬೆಳ್ಳಂಪಳ್ಳಿಯ ಶಾಲೆಯೊಂದರ ಚಿತ್ರಣ ತೆರೆದಿಡುತ್ತಿದೆ.ಸಂಬಂಧಪಟ್ಟವರು ತಕ್ಷಣ ಇಲ್ಲಿಗೆ ಶಿಕ್ಷಕರನ್ನು ನೇಮಿಸಿ ಮಕ್ಕಳ ಶಿಕ್ಷಣಕ್ಕೆ ನೆರವಾಗಬೇಕಿದೆ.
PublicNext
28/12/2021 04:22 pm