ಮುಲ್ಕಿ: ಕನ್ನಡ ಭಾಷೆಯ ಉನ್ನತಿಗಾಗಿ ರಾಜ್ಯ ಸರ್ಕಾರವು ಸರ್ಕಾರಿ ಶಾಲೆಗಳಿಗೆ ಹೆಚ್ಚಿನ ಸಹಕಾರವನ್ನು ನೀಡುತ್ತಿದ್ದು ಅನುದಾನಿತ ಶಾಲೆಯನ್ನು ಮರೆತು ತಾರತಮ್ಯ ಧೋರಣೆಯಿಂದ ವರ್ತಿಸುತ್ತಿರುವ ಪರಿಣಾಮ ಇಂದು ಮಕ್ಕಳು ಕನ್ನಡ ಶಾಲೆಯನ್ನು ತೊರೆಯುತ್ತಿದ್ದಾರೆ. ಕನ್ನಡ ಕಲಿಯುವವರೇ ಇಲ್ಲವಾದರೆ ಕನ್ನಡ ಭಾಷೆ ಹೇಗೆ ಬೆಳೆಯಲು ಸಾಧ್ಯ .
ಭಾಷಾ ಪ್ರೌಢಿಮೆಗೆ, ಜ್ಞಾನ ಸಂಪಾದನೆಗೆ ಓದುವ ಹವ್ಯಾಸ ಬಹಳ ಮುಖ್ಯವಾಗಿದ್ದು ಮಕ್ಕಳಿಗೆ ಉತ್ತಮ ಸಾಹಿತ್ಯ ಪುಸ್ತಕ ಓದುವ ಹವ್ಯಾಸವನ್ನು ಹಿರಿಯರು ಮೂಡಿಸಬೇಕೆಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು.
ಕಥಾಬಿಂದು ಪ್ರಕಾಶನದ ವತಿಯಿಂದ ಮಂಗಳವಾರ ಮೂಲ್ಕಿ ಸ್ವಾಗತ್ ಸಂಕೀರ್ಣದಲ್ಲಿ ನಡೆದ ಕವಿಗೋಷ್ಠಿ ಮತ್ತು ರೇಷ್ಮಾ ಶೆಟ್ಟಿ ಗೋರೂರು ರಚಿಸಿದ "ಭಾವಜೀವಿಯ ಅಂತರಂಗ" ಕವನ ಸಂಕಲನ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಕವಿಗೋಷ್ಠಿಯನ್ನು ಉದ್ಘಾಟಿಸಿದ ಹಿರಿಯ ಸಾಹಿತಿ ಲೇಖಕ ಕಬ್ಬಿನಾಲೆ ಶ್ರೀಕರ ಭಾರದ್ವಾಜ್ ರವರು ಮಾತನಾಡಿ, ಶೃಜನಶೀಲ ಬರಹ ಹಾಗೂ ಕವನ ಸಂಕಲನಗಳು ಪುಸ್ತಕ ರೂಪದಲ್ಲಿ ಮುಂದಿನ ಪೀಳಿಗೆಗೆ ಅಧ್ಯಯನ ವಸ್ತುವಾಗಿ ದಾರಿದೀಪವಾಗುತ್ತದೆ ಬಹು ವಿಷಯಗಳಿಂದ ತುಂಬಿದ ಜ್ಞಾನ ಸಂಪತ್ತು ಕವಿಹೃದಯದಲ್ಲಿ ಮೂಡಿ ಬರಹ ರೂಪದಲ್ಲಿ ಪ್ರಕಟವಾಗುತ್ತದೆ. ಮಂಕು ತಿಮ್ಮನ ಕಗ್ಗದಂತೆ ಬಹುಜನ ಮನಮುಟ್ಟುವ ಬರಹಗಳು ಯುವ ಜನತೆಯಿಂದ ಮೂಡಬೇಕು ಎಂದರು.
ಕಾರ್ಕಳ ಅಪರ ಸರ್ಕಾರಿ ವಕೀಲರಾದ ನಂದಿನಿ ಭಾಸ್ಕರ ಶೆಟ್ಟಿ , ಕವನ ಸಂಕಲನ ಹಾಗೂ ಕವಿ ರೇಷ್ಮಾ ಶೆಟ್ಟಿಯವರ ಬಗ್ಗೆ ಮಾತನಾಡಿ, ರಾಜ್ಯ ಮಟ್ಟದ ಕಬ್ಬಡ್ಡಿ ಕ್ರೀಡಾಪಟುವಾಗಿ ಬೆಳೆದು ಪತ್ರಿಕೋದ್ಯಮದಲ್ಲಿ ಪದವಿಗಳಿಸಿ, ಹೋಟೇಲು ವೃತ್ತಿ ಜೀವನದಲ್ಲಿ ಸಿಕ್ಕ ಬಿಡುವಿನ ಸಮಯ ಮನದ ಭಾವನೆಗಳಿಗೆ ಅಕ್ಷರ ರೂಪಕೊಟ್ಟು ರಚಿಸಿದ ಕವನ ಸಂಕಲನವು ಜೀವನಾನುಭವದ ಮೂರ್ತರೂಪ ಎಂದರು.
ರೇಷ್ಮಾ ಶೆಟ್ಟಿ ಗೋರೂರುರವರ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಅಪೂರ್ವ ಕಾರಂತ ಪುತ್ತೂರು, ಪ್ರಜ್ಞಾ ಕುಲಾಲ್, ಕಾವ್ಯಾ ಪೂಜಾರಿ, ರಶ್ಮಿ ಸನಿಲ್, ಮಾನಸ ಪ್ರವೀಣ್ ಭಟ್, ಭಾಗ್ಯಕ್ಷ್ಮೀ, ಸುನೀತಾ ಪ್ರದೀಪ್ ಕುಮಾರ್, ನಾರಾಯಣ ಕುಂಬ್ರ,ಬದ್ರುದ್ದೀನ್ ಕೂಳೂರು ಭಾಗವಹಿಸಿದರು.
ಕಥಾಬಿಂದು ಪ್ರಕಾಶನದ ಮುಖ್ಯಸ್ಥ ಪಿ.ವಿ.ಪ್ರದೀಪ್ ಕುಮಾರ್ ಸ್ವಾಗತಿಸಿದರು, ಅಪೂರ್ವ ಕಾರಂತ ನಿರೂಪಿಸಿದರು, ಸುನೀತಾ ಪ್ರದೀಪ್ ವಂದಿಸಿದರು.
Kshetra Samachara
10/08/2021 05:48 pm