ಉಡುಪಿ: ಉಡುಪಿಯಲ್ಲಿ ಹಿಜಾಬ್ ವಿಚಾರವಾಗಿ ಸಾಕಷ್ಟು ವಿವಾದಗಳು ನಡೆದಿದ್ದರೂ ಮುಸ್ಲಿಂ ಸಮುದಾಯದ ಹೆಣ್ಣುಮಕ್ಕಳು ಶಿಕ್ಷಣವೇ ಮುಖ್ಯ ಎಂಬ ಸಂದೇಶ ರವಾನಿಸಿದ್ದಾರೆ. ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಹಲವು ವಿದ್ಯಾರ್ಥಿನಿಯರು ಪಿಯುಸಿಯಲ್ಲಿ ಉತ್ಕೃಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಸಾಧನೆ ಮಾಡಿದ್ದಾರೆ. ಉಡುಪಿಯ ಪಿಪಿಸಿ ಕಾಲೇಜಿನ ವಿದ್ಯಾರ್ಥಿನಿ ಅಮೀನಾ ಶಿಮಾಝ್ ವಿಜ್ಞಾನ ವಿಭಾಗದಲ್ಲಿ 600 ಅಂಕಗಳಿಗೆ 583 ಅಂಕಗಳೊಂದಿಗೆ ಶೇ 97.17ರಷ್ಟು ಅಂಕ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.
ಅಮೀನಾ ಅವರು ಉದ್ಯಾವರದ ಮುಹಮ್ಮದ್ ಇಸಾಕ್ - ಶಿರೀನ್ ಬಾನು ದಂಪತಿಯ ಪುತ್ರಿ. ಮುಹಮ್ಮದ್ ಇಸಾಕ್ ಅವರಿಗೆ ಮೂವರು ಹೆಣ್ಣುಮಕ್ಕಳು. ಹಿರಿಯವಳು ಈಗಾಗಲೇ ಇಂಜಿನಿಯರ್ ಆಗಿದ್ದರೆ, ಎರಡನೆಯವಳು ಫ್ಯಾಶನ್ ಡಿಸೈನಿಂಗ್ ಮಾಡಿದ್ದಾಳೆ. ಮೂರನೇ ಪುತ್ರಿ ಅಮೀನಾ ಶಿವಾಝ್ ವಿಜ್ಞಾನ ವಿಭಾಗದಲ್ಲಿ ಪಿಪಿಸಿ ಕಾಲೇಜು ಹೆಮ್ಮೆ ಪಡುವಂತಹ ಸಾಧನೆ ಮಾಡಿದ್ದಾರೆ. ಮುಂದೆ ಕಂಪ್ಯೂಟರ್ ಸೈನ್ಸ್ ಓದಿ ಅದೇ ಕ್ಷೇತ್ರದಲ್ಲಿ ನೌಕರಿ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದಾರೆ.
ಮಹಮ್ಮದ್ ಇಸಾಕ್ ಶಿರೀನ್ ಬಾನು ದಂಪತಿಯ ಮೂವರೂ ಹೆಣ್ಣುಮಕ್ಕಳು ವಿಶಿಷ್ಟ ಶ್ರೇಷಿಯಲ್ಲಿ ಪಾಸಾದವರು. ಎಲ್ಲಕ್ಕಿಂತ ಶಿಕ್ಷಣವೇ ಮುಖ್ಯ, ಉಳಿದದ್ದು ನಂತರ. ನನ್ನನ್ನು ನೋಡಿ ಇಬ್ಬರು ತಂಗಿಯರು ಚೆನ್ನಾಗಿ ಓದಿದ್ದಾರೆ. ಪರಸ್ಪರ ಪ್ರೇರಣೆಯಿಂದ ಹೆಣ್ಣುಮಕ್ಕಳು ಓದಿ ಏನಾದರೂ ಸಾಧಿಸಬೇಕು ಎಂಬುದು ಅಕ್ಕ ಶಮ್ನಾ ನಾಝ್ ಅಭಿಪ್ರಾಯ.
ತಂದೆ ಇಸಾಕ್ ಗ್ಯಾರೇಜ್ ಇಟ್ಟುಕೊಂಡು ಮೂವರೂ ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ನೀಡಿದ್ದಾರೆ. ಉಡುಪಿಯ ಉದ್ಯಾವರದ ಈ ಕುಟುಂಬದ ಮೂವರೂ ಹೆಣ್ಣು ಮಕ್ಕಳು ಮುಸ್ಲಿಂ ಸಮುದಾಯ ಮಾತ್ರವಲ್ಲ, ಎಲ್ಲ ಸಮುದಾಯದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೂ ಒಂದು ಪ್ರೇರಣೆ ಎಂದರೆ ತಪ್ಪಲ್ಲ.
Kshetra Samachara
21/06/2022 04:25 pm