ಉಪ್ಪಿನಂಗಡಿ: ಕಳೆದ ಕೆಲ ದಿನಗಳಿಂದ ಹಿಜಾಬ್ ವಿಚಾರವಾಗಿ ನಾನಾ ಘಟನಾವಳಿಗೆ ಕಾರಣವಾಗುತ್ತಿದ್ದ ಉಪ್ಪಿನಂಗಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರವೂ ಹಿಜಾಬ್ ಧರಿಸಲು ವಿದ್ಯಾರ್ಥಿನಿಯರಿಗೆ 1 ವಾರ ತರಗತಿಗೆ ನಿರ್ಬಂಧ ಹೇರಲಾಗಿದೆ.
ಕಾಲೇಜಿನ ಪ್ರಾಂಶುಪಾಲ ಶೇಖರ್ ಎಷ್ಟೇ ವಿನಂತಿಸಿಕೊಂಡರೂ ತರಗತಿ ಧಿಕ್ಕರಿಸಿದ 24 ಮಂದಿ ವಿದ್ಯಾರ್ಥಿನಿಯರಿಗೆ ಒಂದು ವಾರದ ಕಾಲ
ತರಗತಿ ನಿರ್ಬಂಧ ವಿಧಿಸಲಾಗಿದೆ. ಕಾಲೇಜಿನಲ್ಲಿ ನಡೆಯುತ್ತಿರುವ ಅಹಿತಕರ ಘಟನಾವಳಿಯ ಹಿನ್ನೆಲೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಜಂಟಿ ನಿರ್ದೇಶಕಿ ಸೋಮವಾರದಂದು ಕಾಲೇಜಿಗೆ ಭೇಟಿ ನೀಡಿ ವಿದ್ಯಾರ್ಥಿನಿಯರ ಅಹವಾಲನ್ನು ಆಲಿಸಿದರು. ಅಷ್ಟೇ ಅಲ್ಲದೆ ತರಗತಿಗೆ ಹಾಜರಾಗಿ ಕಲಿಕಾ ಪ್ರಕ್ರಿಯೆಯಲ್ಲಿ ಭಾಗಿಯಾಗಯವಂತೆ ವಿದ್ಯಾರ್ಥಿನಿಯರಿಗೆ ವಿನಂತಿಸಿದರು. ಆದರೆ ಅದ್ಯಾವುದಕ್ಕೂ ಮಾನ್ಯತೆ ನೀಡದ ವಿದ್ಯಾರ್ಥಿನಿಯರು ಹಿಜಾಬ್‌ನೊಂದಿಗೆ ಕಾಲೇಜು ಪ್ರವೇಶಿಸಲು ಹಠ ಹಿಡಿದರು. ಈ ಹಿನ್ನೆಲೆಯಲ್ಲಿ ಸೋಮವಾರದಂದು ಡ್ರೆಸ್ಸಿಂಗ್ ರೂಮಿನಲ್ಲೂ ಇವರಿಗೆ ಠಿಕಾಣಿ ಹೂಡಲು ಅವಕಾಶ ನಿರಾಕರಿಸಲಾಗಿತ್ತು.
ದಿನವಿಡೀ ನಡೆದ ಪ್ರಹಸನದ ಬಳಿಕ ಸಂಜೆ ವೇಳೆಗೆ ಕಾಲೇಜಿನ ಉಪನ್ಯಾಸಕರ ಸಭೆ ಕರೆದ ಕಾಲೇಜು ಪ್ರಾಂಶುಪಾಲ ಶೇಖರ್ ಅವರು ರಾಜ್ಯ ಉಚ್ಚ ನ್ಯಾಯಾಲಯದ ತೀರ್ಪು, ಸರಕಾರದ ಸುತ್ತೋಲೆ, ಕಾಲೇಜು ಅಭಿವೃದ್ಧಿ ಸಮಿತಿ ಕೈಗೊಂಡ ನಿರ್ಣಯದ ಆಧಾರದಲ್ಲಿ ಸಮವಸ್ತ್ರ ನಿಯಮಾವಳಿಯನ್ನು ಉಲ್ಲಂಘಿಸುತ್ತಾ ಕಾಲೇಜಿನ ಕಲಿಕಾ ವಾತಾವರಣವನ್ನು ಹಾನಿಗೊಳಿಸುತ್ತಿರುವ 24 ವಿದ್ಯಾರ್ಥಿನಿಯರಿಗೆ ಮುಂದಿನ ಒಂದು ವಾರದ ಕಾಲ ತರಗತಿ ನಿರ್ಬಂಧ ವಿಧಿಸಿ ನಿರ್ಣಯ ಕೈಗೊಂಡರು. ಇದೇ ವಿವಾದಕ್ಕೆ ಸಂಬಂಧ ಈ ಹಿಂದೆಯೇ 7 ಮಂದಿ ವಿದ್ಯಾರ್ಥಿಯರಿಗೆ ತರಗತಿ ನಿರ್ಬಂಧ ವಿಧಿಸಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
Kshetra Samachara
07/06/2022 09:43 am