ಉಪ್ಪಿನಂಗಡಿ: ಹಿಜಾಬ್ ವಿಷಯವಾಗಿ ಒಂದು ವಾರದಿಂದ ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದಿನಕ್ಕೊಂದು ವಿವಾದ, ಸಮಸ್ಯೆಗಳು ಹುಟ್ಟಿಕೊಳ್ಳುತ್ತಿದ್ದು, ಕಠಿಣ ಕ್ರಮದ ಹೊರತಾಗಿ ಇದು ಮುಗಿಯುವ ಲಕ್ಷಣಗಳು ಗೋಚರಿಸುತ್ತಿಲ್ಲ. ಹಿಜಾಬ್ಧಾರಿಣಿಯರು ಕಾಲೇಜು ಅಭಿವೃದ್ಧಿ ಸಮಿತಿಯ ನಿರ್ಣಯವನ್ನು ನಾವು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಹಿಜಾಬ್ ಧರಿಸಿಕೊಂಡೇ ಬರುತ್ತೇವೆ ಎಂದು ಪಟ್ಟು ಹಿಡಿದು, ಕಾಲೇಜಿನ ಡ್ರೆಸ್ಸಿಂಗ್ ರೂಮಿನಲ್ಲೇ ಠಿಕಾಣಿ ಹೂಡಿದ ಘಟನೆ ನಡೆಯಿತು.
ಇವರನ್ನು ಬೆಂಬಲಿಸಿ ಕೆಲ ವಿದ್ಯಾರ್ಥಿಗಳು ಕೂಡಾ ತರಗತಿ ಬಹಿಷ್ಕರಿಸಿ ಡ್ರೆಸ್ಸಿಂಗ್ ರೂಮಿನ ಹೊರಗಡೆಯೇ ಠಿಕಾಣಿ ಹೂಡಿದರು.
ತರಗತಿಯೊಳಗೆ ಹಿಜಾಬ್ ಧರಿಸಿ ಕುಳಿತುಕೊಂಡ ಏಳು ಮಂದಿ ವಿದ್ಯಾರ್ಥಿನಿಯರನ್ನು ಕೆಲ ದಿನಗಳ ಕಾಲ ಅಮಾನತುಗೊಳಿಸಿದ ನಡುವೆಯೂ ಕಾಲೇಜು ವರಾಂಡದಲ್ಲಿ ಹಿಜಾಬ್ ಧರಿಸಿ ಸುತ್ತುತ್ತಿರುವುದು ಮುಂದುವರಿದಿತ್ತು. ಇದು ಹಲವು ಸಮಸ್ಯೆ, ಗೊಂದಲ, ಗದ್ದಲಗಳಿಗೆ ಕಾರಣವಾಗಿತ್ತಲ್ಲದೆ, ಹಲವು ವಿದ್ಯಾರ್ಥಿಗಳ ಆಕ್ಷೇಪಣೆಗೂ ಕಾರಣವಾಗಿತ್ತು.
ಈ ಹಿನ್ನೆಲೆಯಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷ, ಪುತ್ತೂರು ಶಾಸಕರೂ ಆಗಿರುವ ಸಂಜೀವ ಮಠಂದೂರು ಅವರ ಅಧ್ಯಕ್ಷತೆಯಲ್ಲಿ ಜೂ.೩ರಂದು ಅಭಿವೃದ್ಧಿ ಸಮಿತಿಯ ಸಭೆ ನಡೆದು, ಇನ್ನು ಮುಂದೆ ವಿದ್ಯಾರ್ಥಿನಿಯರು ಕಾಲೇಜು ಕ್ಯಾಂಪಸ್ ಪ್ರವೇಶಿಸಿ ಡ್ರೆಸಿಂಗ್ ರೂಮ್ನಲ್ಲಿ ಬಟ್ಟೆ ಬದಲಾಯಿಸಿದ ಬಳಿಕ ಯಾವುದೇ ಕಾರಣಕ್ಕೂ ಕಾಲೇಜು ಕ್ಯಾಂಪಸ್ ನೊಳಗೆ ಕಾಲೇಜು ಸಮವಸ್ತ್ರ ಹೊರತಾದ ಬಟ್ಟೆ ತೊಡುವಂತಿಲ್ಲ.
ಈ ನಿಮಯವನ್ನು ಉಲ್ಲಂಘಿಸುವ ವಿದ್ಯಾರ್ಥಿಗಳನ್ನು ತಕ್ಷಣದಿಂದಲೇ ಅಮಾನತುಗೊಳಿಸಬೇಕು. ಬಳಿಕ ಮುಚ್ಚಳಿಕೆ ಬರೆಸಿಕೊಂಡು ಕಲಿಕೆಗೆ ಅವಕಾಶ ಕಲ್ಪಿಸಬೇಕು. ಮುಚ್ಚಳಿಕೆಯ ಹೊರತಾಗಿಯೂ ನಿಯಮ ಉಲ್ಲಂಘಿಸುವ ಕೃತ್ಯವೆಸಗಿದರೆ ನಿರ್ದಾಕ್ಷಿಣ್ಯವಾಗಿ ಕಾಲೇಜಿನಿಂದ ಡಿಬಾರ್ ಗೊಳಿಸಬೇಕೆಂದು ನಿರ್ಣಯ ಕೈಗೊಳ್ಳಲಾಗಿತ್ತು. ಇದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಕಾಲೇಜಿನ ಪ್ರಾಂಶುಪಾಲರಿಗೆ ನಿರ್ದೇಶನ ನೀಡಲಾಗಿತ್ತು.
ಆದರೆ ಸಿಡಿಸಿಯ ಈ ನಿರ್ಣಯಕ್ಕೆ ಹಿಜಾಬ್ ಪರವಾದ ಕೆಲವರು ವಿರೋಧ ವ್ಯಕ್ತಪಡಿಸಿದ್ದು, ಯಾವುದೇ ಕಾರಣಕ್ಕೂ ಸಿಡಿಸಿಯ ನಿರ್ಣಯವನ್ನು ಪಾಲಿಸುವುದಿಲ್ಲ. ಕಾಲೇಜಿಗೆ ಬರುವುದಾದರೆ ಹಿಜಾಬ್ ಹಾಕಿಕೊಂಡೇ ಬರುತ್ತೇವೆ ಎಂದು ಶನಿವಾರ ಪಟ್ಟು ಹಿಡಿದಿದ್ದರು. ಅವರಿಗೆ ಕಾಲೇಜು ವರಾಂಡಕ್ಕೆ ಪ್ರವೇಶಕ್ಕೆ ಅವಕಾಶ ಸಿಗದಿದ್ದಾಗ ಡ್ರೆಸ್ಸಿಂಗ್ ರೂಂನಲ್ಲೇ ಕುಳಿತುಕೊಂಡರು. ಇವರನ್ನು ಬೆಂಬಲಿಸಿ ಕೆಲ ವಿದ್ಯಾರ್ಥಿಗಳು ಕಾಲೇಜು ಬಿಡುವವರೆಗೆ ಅಲ್ಲೇ ಠಿಕಾಣಿ ಹೂಡಿದರು. ಇನ್ನುಳಿದಂತೆ ತರಗತಿಯಲ್ಲಿ ಹಾಜರಿದ್ದ ಮಕ್ಕಳಿಗೆ ಪಾಠ ಪ್ರವಚನ ಸಾಂಗವಾಗಿ ನೆರವೇರಿತು.
Kshetra Samachara
05/06/2022 11:09 am