ಪಬ್ಲಿಕ್ ನೆಕ್ಸ್ಟ್ ವಿಶೇಷ ವರದಿ: ದೀಪಕ್ ಉಪ್ಪಿನಂಗಡಿ
ಉಪ್ಪಿನಂಗಡಿ: ರಾಜ್ಯಾದ್ಯಂತ ಹಿಜಾಬ್ ವಿವಾದ ಭುಗಿಲೆದ್ದಿದ್ದರೂ, ದ.ಕ. ಜಿಲ್ಲೆಗೆ ಈ ಬಿಸಿ ತಟ್ಟಿರಲಿಲ್ಲ. ಆದರೆ, ಆ ಕಡೆ ಹಿಜಾಬ್ ಕಾವು ತಣ್ಣಗಾಗುತ್ತಿದ್ದಂತೆ ಇತ್ತ ಹಿಜಾಬ್ ವಿವಾದ ತಾರಕಕ್ಕೇರಿದೆ. ವಾರದ ಹಿಂದೆ ಮಂಗಳೂರು ವಿವಿ ಕಾಲೇಜಿನ ತರಗತಿಯಲ್ಲಿ ಹಿಜಾಬ್ ಗೆ ಅವಕಾಶ ನೀಡಬೇಕೆಂದು 16 ವಿದ್ಯಾರ್ಥಿನಿಯರು ಪಟ್ಟು ಹಿಡಿದಿದ್ದರು. ಈ ವಿವಾದ ಇನ್ನೂ ಇತ್ಯರ್ಥವಾಗಿಲ್ಲ. ಈ ಬೆನ್ನಲ್ಲೇ ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೂದಿ ಮುಚ್ಚಿದ ಕೆಂಡದಂತಿದ್ದ ʼಹಿಜಾಬ್ʼ ಇಂದು ಘರ್ಷಣೆಗೆ ಎಡೆ ಮಾಡಿದೆ.
ತರಗತಿಯಲ್ಲಿ ಹಿಜಾಬ್ ಗೆ ಅವಕಾಶ ಕೋರಿ 6 ವಿದ್ಯಾರ್ಥಿನಿಯರು ಪಟ್ಟು ಹಿಡಿದಿದ್ದರು. ಆದರೆ, ಅವಕಾಶ ನಿರಾಕರಿಸಲಾಗಿತ್ತು. ಅಲ್ಲದೆ, ಕಾಲೇಜು ನಿಯಮಾವಳಿ ಉಲ್ಲಂಘನೆ ಹಿನ್ನೆಲೆಯಲ್ಲಿ ಈ 6 ವಿದ್ಯಾರ್ಥಿನಿಯರನ್ನು ಪ್ರಾಂಶುಪಾಲರು ಅಮಾನತು ಮಾಡಿದ್ದರು. ಆ ಬಳಿಕವೂ ಹಿಜಾಬ್, ಕಾಲೇಜಿನಲ್ಲಿ ಕಂಡು ಬರುತ್ತಿದೆ ಎಂದು ಆರೋಪಿಸಿ ಕೆಲ ವಿದ್ಯಾರ್ಥಿಗಳು ಕಾಲೇಜಿಗೆ ಕೇಸರಿ ಶಾಲು ಧರಿಸಿ ಬಂದಿದ್ದರು. ಈ ಎಲ್ಲಾ ವಿಚಾರದ ಬಗ್ಗೆ ಸ್ಪಷ್ಟತೆಗಾಗಿ ಮಾಧ್ಯಮದವರು ಪ್ರಾಂಶುಪಾಲರಲ್ಲಿಗೆ ಮಾತನಾಡಲು ಬಂದಿದ್ದರು.
ಅಲ್ಲಿಂದ ಹೊರ ಬರುತ್ತಿದ್ದಂತೆ ವಿದ್ಯಾರ್ಥಿಗಳ ಗುಂಪೊಂದು ವರದಿಗಾರರಿಬ್ಬರಿಗೆ ದಿಗ್ಬಂಧನ ಹಾಕಿ ಈ ಬಗ್ಗೆ ವರದಿ ಮಾಡದಂತೆ ಧಮ್ಕಿ ಹಾಕಿದೆ. ಅಲ್ಲದೆ, ಕಾಲೇಜು ಕೊಠಡಿಯಲ್ಲಿ ಕೂಡಿ ಹಾಕಿ ಮೊಬೈಲ್ ಕಿತ್ತು ಸೆರೆ ಹಿಡಿದಿದ್ದ ಕಾಲೇಜು ಚಿತ್ರಣವನ್ನು ಡಿಲೀಟ್ ಮಾಡಿತ್ತು. ಈ ಸಂದರ್ಭ ಕಾಲೇಜಿಗೆ ಸಂಬಂಧಪಡದ ವ್ಯಕ್ತಿಯೋರ್ವ ಇದ್ದು, ವಿದ್ಯಾರ್ಥಿಗಳಿಗೆ ಕುಮ್ಮಕ್ಕು ನೀಡುತ್ತಿರುವುದು ಸ್ಪಷ್ಟವಾಗಿದೆ. ಇದೆಲ್ಲವೂ ಕಾಲೇಜು ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
PublicNext
03/06/2022 07:38 am