ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಮೂರು ವಾರಗಳ ನಂತರವೂ ಮುಗಿದಿಲ್ಲ ಹಿಜಾಬ್ ವಿವಾದ!

ವರದಿ: ರಹೀಂ ಉಜಿರೆ

ಉಡುಪಿ: ಉಡುಪಿಯ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಹಿಜಾಬ್ ವಿವಾದ ಇನ್ನೂ ಮುಗಿದಿಲ್ಲ. ಕಳೆದ ಮೂರು ವಾರಗಳಿಂದ ತರಗತಿಯಿಂದ ಹೊರಗೆ ಉಳಿಯಲ್ಪಟ್ಟ ವಿದ್ಯಾರ್ಥಿನಿಯರು ಇಂದು ಕಾಲೇಜಿನ ಗೇಟ್ ಬಳಿ ಭಿತ್ತಿಪತ್ರಗಳನ್ನು ಪ್ರದರ್ಶಿಸಿ ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದ್ದಾರೆ."ಹಿಜಾಬ್ ನನ್ನ ಹಕ್ಕು,ನಮಗೆ ನ್ಯಾಯ ಬೇಕು’, ‘ಇದು ನನ್ನ ಮೂಲಭೂತ ಹಕ್ಕು’, ‘ನಾವು ಹಿಜಾಬ್ ಹಾಕಿದ ಕಾರಣಕ್ಕಾಗಿ ತರಗತಿಯಿಂದ ಹೊರಗೆ ಕುಳಿತುಕೊಂಡಿದ್ದೇವೆ’ ಎಂಬ ಭಿತ್ತಿಪತ್ರಗಳನ್ನು ಐವರು ವಿದ್ಯಾರ್ಥಿನಿಯರು ಪ್ರದರ್ಶಿಸಿದರು.

ಇವರು ಇಂದು ಕೂಡ ಹಿಜಾಬ್ ಧರಿಸಿ ಕೊಂಡು ಕಾಲೇಜಿಗೆ ಬಂದ ಕಾರಣಕ್ಕೆ ತರಗತಿಗೆ ಪ್ರವೇಶ ಇಲ್ಲದೆ ಕಾಲೇಜಿನಿಂದ ಹೊರಗೆ ಉಳಿದಿದ್ದರು. ಕಳೆದ ಮೂರು ವಾರಗಳಿಂದ ಸಮಸ್ಯೆ ಬಗೆಹರಿಯದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರು ಈ ರೀತಿಯಲ್ಲಿ ತಮ್ಮ ಪ್ರತಿಭಟನೆ ದಾಖಲಿಸಿದರು.

ಕಾಲೇಜಿನ ದ್ವಿತೀಯ ಪಿಯುಸಿಯ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ತಲಾ ಮೂವರು ಹಾಗೂ ಪ್ರಥಮ ಪಿಯುಸಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ತಲಾ ಒಬ್ಬರು ಸೇರಿದಂತೆ ಒಟ್ಟು ಎಂಟು ಮಂದಿ ವಿದ್ಯಾರ್ಥಿನಿಯರು ತರಗತಿ ಪ್ರವೇಶ ಇಲ್ಲದೆ ಕಾಲೇಜಿನ ಹೊರಗಡೆ, ಸ್ಟಾಫ್ ರೂಮ್, ಲೈಬ್ರರಿಯಲ್ಲಿ ಕುಳಿತು ಮನೆಗೆ ಹೋಗುತ್ತಿದ್ದಾರೆ. ಇವರಲ್ಲಿ ಮೂವರು ಅನಾರೋಗ್ಯದ ಕಾರಣ ಕಾಲೇಜಿಗೆ ಬಂದಿಲ್ಲ. ಉಳಿದ ಐವರು ವಿದ್ಯಾರ್ಥಿನಿಯರು ಭಿತ್ತಿಪತ್ರ ಪ್ರದರ್ಶಿಸಿ ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.

‘ನಮ್ಮ ಮನೆಯವರು ತುಂಬಾ ಮನವಿ ಮಾಡಿದ್ದಾರೆ. ನಮಗೆ ಯಾವುದೇ ಸಕರಾತ್ಮಕ ಸ್ಪಂದನೆ ಸಿಕ್ಕಿಲ್ಲ. ನಾವು ಪ್ರಥಮ ಪಿಯುಸಿಯಲ್ಲಿಯೂ ಸ್ಕಾರ್ಫ್ ಹಾಕಿ ತರಗತಿಗೆ ಬಂದಿದ್ದೇವೆ. ಆಗ ಬಲತ್ಕಾರವಾಗಿ ಸ್ಕಾರ್ಫ್ ತೆಗೆಸಿದರು. ಈಗ ನಾವು ಹೋರಾಟಕ್ಕೆ ಇಳಿದ ಕಾರಣಕ್ಕೆ ಪ್ರಾಂಶುಪಾಲರು ನಮಗೆ ಹಿಂಸೆ ನೀಡುತ್ತಿದ್ದಾರೆ. ನಮಗೆ ಶಿಕ್ಷಣ ಬೇಕು. ಅದರೊಂದಿಗೆ ನಮ್ಮ ಧಾರ್ಮಿಕ ಹಕ್ಕಿನಂತೆ ಸ್ಕಾರ್ಫ್ ಹಾಕಲು ಅವಕಾಶ ನೀಡಬೇಕು’ ಎಂದು ವಿದ್ಯಾರ್ಥಿನಿಯರು ಹೇಳಿದ್ದಾರೆ.

Edited By : Manjunath H D
PublicNext

PublicNext

21/01/2022 12:51 pm

Cinque Terre

45.65 K

Cinque Terre

20

ಸಂಬಂಧಿತ ಸುದ್ದಿ