ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ವಿವಿಧ ಪರೀಕ್ಷೆಗಳು ಆರಂಭವಾಗಿದ್ದು, ವಿಶ್ವವಿದ್ಯಾಲಯ ಮಾಡಿರುವ ಎಡವಟ್ಟಿನಿಂದ ಮೊದಲ ದಿನವೇ ಬಿಬಿಎ ದ್ವಿತೀಯ ಸೆಮಿಸ್ಟರ್‌ನ ಪರೀಕ್ಷೆ ಮುಂದೂಡಿಕೆಯಾಗಿದೆ.
ಸೆಪ್ಟೆಂಬರ್ 5ರಂದು ಮಂಗಳೂರು ವಿವಿ ವ್ಯಾಪ್ತಿಯ 24 ಕಾಲೇಜುಗಳಲ್ಲಿ ಬಿಬಿಎ ದ್ವಿತೀಯ ಸೆಮಿಸ್ಟರ್‌ನ ವಿವಿಧ ಪರೀಕ್ಷೆಗಳು ಆರಂಭವಾಗಿತ್ತು. ನಿನ್ನೆ ಮೊದಲ ದಿನದ ಕನ್ನಡ ಪರೀಕ್ಷೆ ಆರಂಭವಾಗಿತ್ತು. ಆದರೆ ವಿದ್ಯಾರ್ಥಿಗಳಿಗೆ ನೀಡಿರುವ ಪ್ರಶ್ನೆಪತ್ರಿಕೆಯ ಮೇಲ್ಭಾಗದಲ್ಲಿ ಬಿಬಿಎ ದ್ವಿತೀಯ ಸೆಮಿಸ್ಟರ್ ಪರೀಕ್ಷೆ ಎಂದು ನಮೂದಾಗಿತ್ತು. ಆದರೆ ಪಶ್ನೆಗಳೆಲ್ಲವೂ ಹಳೆಯ ಸೆಮಿಸ್ಟರ್ ನದ್ದಾಗಿತ್ತು. ತಕ್ಷಣ ಎಲ್ಲಾ ಕಾಲೇಜುಗಳ ಪರೀಕ್ಷಾ ಕೇಂದ್ರಗಳು ಇದನ್ನು ಮಂಗಳೂರು ವಿವಿಯ ಗಮನಕ್ಕೆ ತಂದಿದೆ.
ಮಂಗಳೂರು ವಿವಿಯ ಕುಲಸಚಿವ(ಪರೀಕ್ಷಾಂಗ) ಪ್ರೊ. ಪಿ.ಎಲ್ ಧರ್ಮ ಅವರು ತಕ್ಷಣ ಬಿಬಿಎ ದ್ವಿತೀಯ ಸೆಮಿಸ್ಟರ್ ನ ಕನ್ನಡ ಪರೀಕ್ಷೆಯನ್ನು ರದ್ದುಗೊಳಿಸಿ ನೂತನ ಪ್ರಶ್ನೆ ಪತ್ರಿಕೆಗಳೊಂದಿಗೆ ಪರೀಕ್ಷೆ ನಡೆಸುವುದಾಗಿ ಹೇಳಿದ್ದಾರೆ. ಪರಿಣಾಮ ಪರೀಕ್ಷೆ ಆರಂಭವಾದ ಕೇವಲ ಅರ್ಧ ಗಂಟೆಯೊಳಗೆ ಪರೀಕ್ಷೆ ರದ್ದಾಗಿದೆ. ಪರಿಣಾಮ ಮುಜುಗರಕ್ಕೊಳಗಾದ ಮಂಗಳೂರು ವಿವಿ ಪರಿಷ್ಕೃತ ದಿನಾಂಕವನ್ನು ಶೀಘ್ರವೇ ತಿಳಿಸುವುದಾಗಿ ವಿವಿ ಆಡಳಿತ ಮಂಡಳಿಯ ಕಾಲೇಜುಗಳಿಗೆ ತಿಳಿಸಿದೆ.
ಈ ಪ್ರಕರಣ ಸಂಬಂಧ ಪ್ರಶ್ನೆಪತ್ರಿಕೆ ಸಿದ್ಧಗೊಳಿಸಿರುವ ಕಾಲೇಜು, ಪ್ರಶ್ನೆ ಪತ್ರಿಕೆ ಪೂರೈಕೆಯ ಹೊಣೆ ಹೊತ್ತಿರುವ ಪರೀಕ್ಷಾಂಗ ವಿಭಾಗದ ಮುಖ್ಯಸ್ಥರಿಗೆ ಮಂಗಳೂರು ವಿವಿ ನೋಟಿಸ್ ಜಾರಿಗೊಳಿಸಿದೆ.
Kshetra Samachara
06/09/2022 11:10 am