ಮಂಗಳೂರು: ಕೊರೊನಾ ಲಾಕ್ ಡೌನ್ ನಂತರ ಇದೀಗ ಮತ್ತೆ ಕಾಲೇಜುಗಳು ಆರಂಭಗೊಳ್ಳಲು ಸಿದ್ಧಗೊಂಡಿವೆ.ಸರಕಾರದ ಮಾರ್ಗಸೂಚಿಯಂತೆ ಕಾಲೇಜುಗಳು ಆರಂಭಗೊಳ್ಳುತ್ತಿದ್ದು, ದ.ಕ. ಜಿಲ್ಲೆಯಾದ್ಯಂತ ಪದವಿ, ಸ್ನಾತಕೋತ್ತರ ಕಾಲೇಜುಗಳ ಅಂತಿಮ ವರ್ಷದ ತರಗತಿ ನಾಳೆಯಿಂದ ಆರಂಭವಾಗಲಿದೆ.
ಈಗಾಗಲೇ ಜಿಲ್ಲೆಯಾದ್ಯಂತ ಕಾಲೇಜು ಕ್ಯಾಂಪಸ್ ಗಳನ್ನು ಸ್ಯಾನಿಟೈಸ್ ಮಾಡಲಾಗಿದೆ. ಅಲ್ಲದೆ, ಜಿಲ್ಲಾಡಳಿತ ಸೂಚನೆಯಂತೆ ತರಗತಿಗೆ ಹಾಜರಾಗುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಕೋವಿಡ್ ಪ್ರಮಾಣಪತ್ರ ಹಾಜರುಪಡಿಸಬೇಕಿದೆ. ಮಂಗಳೂರು ವಿವಿ ವ್ಯಾಪ್ತಿಯ ಬಹುತೇಕ ಕಾಲೇಜುಗಳು ನಾಳೆ ತೆರೆಯಲಿದೆ.
ಮಂಗಳೂರು ನಗರದ ಕಾರ್ ಸ್ಟ್ರೀಟ್ ನಲ್ಲಿರುವ ಪಿ. ದಯಾನಂದ ಪೈ- ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು ತಮ್ಮ ಕ್ಯಾಂಪಸ್ ನಲ್ಲೇ ಕೋವಿಡ್ ಟೆಸ್ಟ್ ನಡೆಸುತ್ತಿದ್ದು, ಅಂತಿಮ ಪದವಿ ತರಗತಿಯ ನೂರಾರು ವಿದ್ಯಾರ್ಥಿಗಳು ಕೋವಿಡ್ ಟೆಸ್ಟ್ ಗಾಗಿ ಕ್ಯಾಂಪಸ್ ಗೆ ಹಾಜರಾಗಿದ್ದಾರೆ.
ಒಟ್ಟಿನಲ್ಲಿ ಜಿಲ್ಲೆಯಾದ್ಯಂತ ಸರಕಾರದ ಮಾರ್ಗಸೂಚಿಯಂತೆ ಪದವಿ, ಸ್ನಾತಕೋತ್ತರ ಪದವಿಯ ಅಂತಿಮ ವರ್ಷದ ತರಗತಿಗಳು ನಾಳೆಯಿಂದ ಆರಂಭಿಸಲಿದ್ದು, ಕೊರೊನಾ ಲಾಕ್ ಡೌನ್ ನಂತರ ಸರಿಸುಮಾರು 7 ತಿಂಗಳ ನಂತರ ಮತ್ತೆ ಕ್ಯಾಂಪಸ್ ಕಡೆ ಹೆಜ್ಜೆ ಹಾಕುವಂತಾಗಿದೆ. ವಿಶೇಷವಾಗಿ ದ.ಕ. ಜಿಲ್ಲೆಯ ಕಾಲೇಜುಗಳಲ್ಲಿ ನೆರೆಯ ಕೇರಳದ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ನಾಳೆ ತರಗತಿಗೆ ಹಾಜರಾಗುವ ಉದ್ದೇಶದಿಂದ ನಗರಕ್ಕೆ ಆಗಮಿಸಿದ್ದಾರೆ. ಕೋವಿಡ್ ಸಂಖ್ಯೆ ಇಳಿಮುಖವಾಗಿದ್ದರಿಂದ ಪೋಷಕರು ತಮ್ಮ ಮಕ್ಕಳನ್ನು ನಿರಾತಂಕವಾಗಿ ಕಾಲೇಜುಗಳಿಗೆ ಸಿದ್ಧರಾಗಿದ್ದಾರೆ.
Kshetra Samachara
16/11/2020 03:59 pm