ಬಂಟ್ವಾಳ: ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ವಿಚಾರದಲ್ಲಿ ಉಂಟಾಗುತ್ತಿರುವ ಸಮಸ್ಯೆಗಳನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಾಗಿದ್ದು, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಸಮಿತಿ ವತಿಯಿಂದ ರಾಜ್ಯಾದ್ಯಂತ ಸ್ಕಾಲರ್ ಶಿಪ್ ಕೊಡಿ ರಾಜ್ಯವ್ಯಾಪಿ ವಿದ್ಯಾರ್ಥಿ ಆಂದೋಲನ ನಡೆಸಲು ತೀರ್ಮಾನಿಸಿದೆ.
ಈ ವಿಚಾರವನ್ನು ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಸಿ.ಎಫ್.ಐ. ರಾಜ್ಯ ಸಮಿತಿ ಸದಸ್ಯ ಮುಹಮ್ಮದ್ ಸಾದಿಕ್ ತಿಳಿಸಿ, ಬಂಟ್ವಾಳ ತಾಲೂಕು ವತಿಯಿಂದ ನ. 24ರಂದು ಸಾಂಕೇತಿಕ ಪ್ರತಿಭಟನಾ ಧರಣಿ ಮಾಡಲಿದ್ದೇವೆ. ಈ ಆಂದೋಲನದಲ್ಲಿ ವಿವಿಧ ರೀತಿಯ ಹೋರಾಟ ರೂಪುಗೊಳ್ಳಲಿದ್ದು, ವಿದ್ಯಾರ್ಥಿಗಳು, ಸಾರ್ವಜನಿಕರು, ಪೋಷಕರು ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಸ್ಕಾಲರ್ ಶಿಪ್ ವ್ಯವಸ್ಥೆ ಸರಳೀಕರಣ, ಬಾಕಿ ಇರುವ ಅರ್ಜಿ ಶೀಘ್ರ ವಿಲೇವಾರಿ, ಮಂಜೂರಾಗದೆ ಬಾಕಿ ಇರುವ ಎಲ್ಲ ಮಾದರಿಯ ವಿದ್ಯಾರ್ಥಿವೇತನ ಶೀಘ್ರ ಬಿಡುಗಡೆ, ಕಡಿತಗೊಳಿಸಿರುವ ಪಿ.ಎಚ್.ಡಿ. ಫೆಲೋಶಿಪ್ ಆದೇಶ ಹಿಂಪಡೆಯಬೇಕು ಹಾಗೂ ದುರುಪಯೋಗವಾಗುತ್ತಿರುವ ವಿದ್ಯಾರ್ಥಿ ವೇತನ ನಿಧಿಯ ಕುರಿತು ಕ್ರಮ ಕೈಗೊಳ್ಳಬೇಕು ಎಂದವರು ಒತ್ತಾಯಿಸಿದರು. ಅಲ್ಪಸಂಖ್ಯಾತ ಇಲಾಖೆಯಿಂದ ಪ್ರಿ ಮೆಟ್ರಿಕ್, ಪೋಸ್ಟ್ ಮೆಟ್ರಿಕ್, ವಿದ್ಯಾಸಿರಿ, ಅರಿವು ಸಾಲ ಮೊದಲಾದ ಸ್ಕಾಲರ್ ಶಿಪ್ ಯೋಜನೆಗಳಿದ್ದು, ಕಳೆದ 2,3 ವರ್ಷಗಳಿಂದ ಹೆಚ್ಚಿನ ಅರ್ಜಿಗಳು ವಿಲೇವಾರಿ ಆಗುತ್ತಿಲ್ಲ. ಇದರಿಂದ ಹಲವು ವಿದ್ಯಾರ್ಥಿಗಳು ಪ್ರತಿವರ್ಷ ವಂಚಿತರಾಗುತ್ತಿದ್ದಾರೆ. ಅಲ್ಪಸಂಖ್ಯಾತ ಇಲಾಖೆಯ ಪಿ.ಎಚ್.ಡಿ. ಮತ್ತು ಎಂ.ಫಿಲ್ ಫೆಲೋಶಿಪ್ ಕೂಡ ಕಡಿತಗೊಳಿಸಲಾಗಿದೆ. ಕೊರೊನಾ ಸಂಕಷ್ಟದ ಸಮಯದಲ್ಲಿ ಅಲ್ಪಸಂಖ್ಯಾತ ಇಲಾಖೆಯ ಈ ಅವ್ಯವಸ್ಥೆಗಳಿಂದ ವಿದ್ಯಾರ್ಥಿಗಳು ತೊಂದರೆಗೊಳಗಾಗಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕ್ಯಾಂಪಸ್ ಫ್ರಂಟ್ ಬಂಟ್ವಾಳ ಅಧ್ಯಕ್ಷ ಫಹದ್ ಅನ್ವರ್, ಜಿಲ್ಲಾ ಸಮಿತಿ ಸದಸ್ಯ ಮುಹಮ್ಮದ್ ಅಶ್ಭಾಕ್ ಮತ್ತು ಐಮಾನ್, ಮಾಧ್ಯಮ ಸಂಯೋಜಕ ಮುಹಮ್ಮದ್ ಸಜ್ಜಾದ್ ಉಪಸ್ಥಿತರಿದ್ದರು.
Kshetra Samachara
20/11/2020 06:39 pm