ಉಡುಪಿ: ಗುರು ಶಿಷ್ಯರ ಸಂಬಂಧವನ್ನು ಪದಗಳಲ್ಲಿ ಬಣ್ಣಿಸಲು ಸಾಧ್ಯವಿಲ್ಲ.
ಅಂತಹವೊಂದು ಪವಿತ್ರ ಅವಿನಾಬಾವ ಸಂಬಂಧವದು ಶಿಷ್ಯರು ಜೀವನದಲ್ಲಿ ಒಂದು ಹಂತ ತಲುಪಿದಾಗ ವಿದ್ಯ ಕಲಿಸಿದ ಗುರುವಿಗಾಗುವ ಆನಂದವನ್ನು ಹೇಳಲಾಗದು.
ವಿದ್ಯಾರ್ಥಿಗಳು ಓದು ಮುಗಿಸಿ ಉನ್ನತ ಸ್ಥಾನವೇರಿದ ಮೇಲೆ ಗುರುಗಳನ್ನು ಸತ್ಕರಿಸುವುದು ಸಾಮಾನ್ಯ ಆದ್ರೆ ಇಲ್ಲೊಬ್ಬ ಶಿಕ್ಷಕರು ವಿದ್ಯಾರ್ಥಿಗೆ ಮಾಡಿರುವ ಸಹಾಯ ನಿಜಕ್ಕೂ ಮೆಚ್ಚುವಂತಿದೆ.
ಹೌದು ಶಿಕ್ಷಕ ಮನಸ್ಸು ಮಾಡಿದರೆ ಏನೆಲ್ಲಾ ಮಾಡಬಹುದು ಎಂಬುದಕ್ಕೆ ಉಡುಪಿಯ ನಿಟ್ಟೂರು ಹೈಸ್ಕೂಲಿನ ಹೆಡ್ ಮಾಸ್ಟರ್ ಮುರಲಿ ಕಡೆಕಾರು ಉದಾಹರಣೆ.
ಮುರಲಿ ಸರ್ ನವೆಂಬರ್ 1 ಕ್ಕೆ ನಿವೃತ್ತಿ ಆಗಿದ್ದು ಸುದೀರ್ಘ 37 ವರ್ಷ ಶಿಕ್ಷಣ ಸೇವೆ ಮಾಡಿ ರಿಟೈರ್ಡ್ ಆಗಿದ್ದಾರೆ.
ತಮ್ಮ ರಿಟೈರ್ಡ್ ಹಣದಲ್ಲಿ ತಮ್ಮದೇ ಶಾಲೆಯ ಕೊರಗ ಸಮುದಾಯದ ಬಡ ವಿದ್ಯಾರ್ಥಿನಿಗೆ ಮನೆವೊಂದನ್ನು ನಿರ್ಮಿಸಿಕೊಟ್ಟು ಮಾದರಿಯಾಗಿದ್ದಾರೆ.
ಮಳೆಗಾಲದಲ್ಲಿ ಸೋರುತ್ತಿದ್ದ, ಬೇಸಿಗೆಯಲ್ಲಿ ಸುಡುತ್ತಿದ್ದ ಮನೆಗೆ ಮುಕ್ತಿ ಸಿಕ್ಕಿದ್ದು, ಸುಂದರ ಸೂರು ನಯನಾ ಕುಟುಂಬಕ್ಕೆ ಸಿಕ್ಕಿದೆ.
ಮುಖ್ಯೋಪಾಧ್ಯಾಯರಾಗಿ ಕರ್ತವ್ಯ ನಿರ್ವಹಿಸಿ ಪ್ರತಿ ವಿದ್ಯಾರ್ಥಿಗಳ ಹಿನ್ನೆಲೆಯನ್ನು ಅರಿತ್ತಿದ್ದಾರೆ.
ಗುಡಿಸಲು ಮಾದರಿಯ ಮನೆಯಲ್ಲಿದ್ದ ನಯನಾಳಿಗೆ ತಮ್ಮ ಸ್ವಂತ ಹಣದಲ್ಲಿ ಮನೆ ಕಟ್ಟಿ ಕೊಡಬೇಕು ಎಂಬ ಅಭಿಲಾಷೆ ಹೊಂದಿದ ಗುರುಗಳು ಅದರಂತೆ ನಡೆದುಕೊಂಡಿದ್ದಾರೆ.
ನೂತನ ಮನೆಯಲ್ಲಿ ಉಡುಪಿ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ಸ್ವಾಮೀಜಿ ದೀಪ ಬೆಳಗಿದ್ದಾರೆ. ವಿದ್ಯಾರ್ಥಿನಿ ನಯನ, ನಮ್ಮ ಮನೆ ಮಳೆಗಾಲದಲ್ಲಿ ಐದಾರು ಕಡೆ ಸೋರುತ್ತಿತ್ತು.
ಮನೆಯಲ್ಲಿ ಏಳು ಜನ ಇರುವುದು ಬಹಳ ಕಷ್ಟವಾಗಿತ್ತು. ಮುರಲಿ ಸರ್ ನಮ್ಮ ಕಷ್ಟ ಅರಿತು ಮನೆ ಕಟ್ಟಿಕೊಟ್ಟಿದ್ದಾರೆ. ನಾನು ಚೆನ್ನಾಗಿ ಕಲಿತು ಶಾಲೆಗೂ ಮುರಲಿ ಸರ್ ಗೂ ಹೆಸರು ತರುವುದಾಗಿ ಹೇಳಿ ಭಾವುಕಳಾಗಿದ್ದಾಳೆ.
ಈ ಮೂಲಕ ವೃತ್ತಿ ಜೀವನವನ್ನು ಸಾರ್ಥಕ ಕಾರ್ಯದ ಮೂಲಕ ಮುರಲಿ ಮುಗಿಸಿದ್ದಾರೆ. ರಿಟೈರ್ಡ್ ಮೆಂಟ್ ಆದ ಮುರಲಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅಭಿನಂದಿಸಿದ್ದಾರೆ.
Kshetra Samachara
03/11/2020 10:50 am