ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: "ಕಾಲೆ ಕೋಲ" ಮೋಕ್ಷ ಪ್ರಾಪ್ತಿಗೆ, ಮನೆಮಂದಿ ನೆಮ್ಮದಿಗೆ ಆಚರಣೆ ವೈವಿಧ್ಯ

ಉಡುಪಿ: "ಕಾಲೆ ಕೋಲ" ಎಂದರೆ ಸತ್ತು ಹೋದ ವ್ಯಕ್ತಿಯ ಆತ್ಮವು ಪ್ರೇತಾತ್ಮವಾಗಿ ಉಳಿಯಬಾರದು. ಅದಕ್ಕೆ ಮೋಕ್ಷ ಸಿಗಬೇಕೆಂದು ಮಾಡುವ ಆಚರಣೆಯಾಗಿದೆ.

ಇಂಥ ಒಂದು ಆಚರಣೆ ಉಡುಪಿಯ ಗುಂಡಿಬೈಲ್ ನಲ್ಲಿ ಗುರುವಾರ ರಾತ್ರಿ ನಡೆಯಿತು. ಇದು ದೈವ ಕೋಲಕ್ಕಿಂತ ಭಿನ್ನವಾಗಿದೆ. ಸತ್ತ ವ್ಯಕ್ತಿಯ ಉತ್ತರಕ್ರಿಯೆಯಂದು ಈ ಕಾಲೆ ಕೋಲವನ್ನು ಆಚರಿಸುತ್ತಾರೆ. ದೈವನರ್ತಕರಾದ ನಲ್ಕೆ ಜನಾಂಗದವರು ಈ ಆಚರಣೆಯಲ್ಲಿ ತೊಡಗುತ್ತಾರೆ.

ಉತ್ತರಕ್ರಿಯೆ ದಿನ ಬೆಳಿಗ್ಗೆ 5 ಮಂದಿ ನಲ್ಕೆಯವರು ಒಬ್ಬ ಕುದುರೆ ವೇಷ, ಇನ್ನೊಬ್ಬ ಮೈಗೆ ಕಪ್ಪು ಬಣ್ಣ ಬಳಿದು ನಗ್ನತೆಯ ವೇಷ, ಮತ್ತೆ ಮೂವರು ದೈವ ಕೋಲದಲ್ಲಿರುವಂತೆ ಮುಖವರ್ಣಿಕೆ ಬರೆದು, ಪೋಷಕು ಹಾಕಿ ಕಾಲಿಗೆ ಗಗ್ಗರ ಕಟ್ಟಿ, ತಲೆಗೆ ಅಡಿಕೆ ಮರದ ಹಾಳೆಯ ಅಪ್ಪರಂಬು ಕಟ್ಟಿ ಓಲಗಕ್ಕೆ ತಕ್ಕಂತೆ ನರ್ತಿಸಲು ಪ್ರಾರಂಭಿಸುತ್ತಾರೆ. ಉತ್ತರಕ್ರಿಯೆಯ ಎಂದಿನ ಕ್ರಮದ ಜೊತೆ ಈ ಕಾಲೆ ಕೋಲ ನಡೆಯುತ್ತದೆ.

ಈ ಆಚರಣೆಯಲ್ಲಿ ಭಾವನಾತ್ಮಕ ಸಂಬಂಧವೂ ಇದೆ. ಅಂದರೆ, ಕಾಲೆ ಹಾಕಿದವರು ವೇಷ ಕಳಚುವುದಕ್ಕೆ ಮುಂಚೆ ಮನೆ ಮಂದಿಯನ್ನು ಕರೆದು ನೀವು ಇನ್ನು ಮುಂದೆ ಯಾವ ರೀತಿ ಜೀವನ ಸಾಗಿಸಬೇಕು, ನನ್ನ ನೆನಪನ್ನು ಯಾವ ರೀತಿ ಇಟ್ಟು ಕೊಳ್ಳಬೇಕು ಮುಂತಾದ ಸಾಂತ್ವನದ ಮಾತುಗಳನ್ನು ಮನೆ ಮಂದಿಗೆ ಹೇಳುತ್ತಾರೆ. ಉತ್ತರಕ್ರಿಯೆಯ ಕ್ರಮ ಮುಗಿಯುವಾಗ ಈ ಕಾಲೆ ಕೋಲವೂ ಮುಗಿಯುತ್ತದೆ. ಇಂತಹ ಆಚರಣೆ ಇಂದು ಕರಾವಳಿಯಾದ್ಯಂತ ನಡೆಯುತ್ತಿರುವುದು ವಿಶೇಷವೇ ಸರಿ.

Edited By : Nagesh Gaonkar
PublicNext

PublicNext

07/10/2022 09:40 pm

Cinque Terre

47.27 K

Cinque Terre

1