ಬಜಪೆ: ಅದೊಂದು ನಿಸರ್ಗದ ಮಡಿಲಿನಲ್ಲಿ ನಿರ್ಮಿಸಲಾಗಿದ್ದ ವೇದಿಕೆ. ವೇದಿಕೆಯಲ್ಲಿ ದಿನ ನಿತ್ಯ ನಡೆಯುತ್ತೆ ಮಕ್ಕಳಿಂದ ಭಜನಾ ಕಾರ್ಯಕ್ರಮ. ಅಂಥದೊಂದು ವಿಶೇಷವಾಗಿ ಮಕ್ಕಳಿಂದ ಭಜನಾ ಕಾರ್ಯಕ್ರಮ ನಡೆಯುತ್ತಿರುವುದು ಕೈಕಂಬ ಸಮೀಪದ ಕಾಜಿಲ ಕೊಡಂಗೆ ಎಂಬಲ್ಲಿ. ವೇದಿಕೆಯನ್ನು ಮರದ ಕೊಂಬೆ ಮತ್ತು ಟಾರ್ಪಲ್‌ಗಳಿಂದ ನಿರ್ಮಿಸಲಾಗಿದ್ದು, ವೇದಿಕೆಯ ಮಂಟಪದಲ್ಲಿ ದೇವರ ಫೋಟೋಗಳನ್ನು ಇಟ್ಟು ಭಜನಾ ಕಾರ್ಯಕ್ರಮ ನಡೆಯುತ್ತದೆ. ಭಜನೆಯಲ್ಲಿ 7ರಿಂದ 14 ವರ್ಷದೊಳಗಿನ ಮಕ್ಕಳು ಪಾಲ್ಗೊಳ್ಳುತ್ತಿದ್ದಾರೆ. ಭಜನೆಯ ಆರಂಭದಲ್ಲಿ 10 ಮಕ್ಕಳಿದ್ದು, ಈಗ 30 ಮಕ್ಕಳು ಪಾಲ್ಗೊಳ್ಳುತ್ತಿದ್ದಾರೆ. ನವರಾತ್ರಿಯ ಸಂದರ್ಭ ಇಲ್ಲಿ ನಿತ್ಯ ಭಜನೆಯು ನಡೆಯುತ್ತದೆ. ಅಲ್ಲದೆ ಮಕ್ಕಳು ಕುಣಿತ ಭಜನೆಯಲ್ಲಿಯೂ ಸೈ ಎನಿಸಿಕೊಂಡಿದ್ದು, ಕಾಜಿಲದ ಭಗವದ್ಗೀತಾ ಭಜನಾ ಮಂಡಳಿಯಲ್ಲಿಯೂ ಭಜನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ಕಾಜಿಲದ ಭಗವದ್ಗೀತಾ ಭಜನಾ ಮಂಡಳಿಯ ಅಧ್ಯಕ್ಷ ರಿತೇಶ್ ಕಾಜಿಲ ಎಂಬುವವರು ಕಳೆದ ವರ್ಷ ನವರಾತ್ರಿಯಂದು ಈ ಭಜನಾ ಕಾರ್ಯಕ್ರಮವನ್ನು ಆರಂಭಿಸಿದ್ದು, ಈ ಬಾರಿಯೂ ಮುಂದುವರಿಸಿಕೊಂಡು ಬಂದಿರುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಭಜನಾ ಕಾರ್ಯಕ್ರಮಕ್ಕೆ ಅಶೋಕ್, ಗಣೇಶ್ ಹಾಗೂ ಉಮೇಶ್ ಶೆಟ್ಟಿಗಾರ್ ಸಾಥ್ ನೀಡುತ್ತಿದ್ದಾರೆ.ಅಲ್ಲದೆ ಗ್ರಾಮಸ್ಥರು ಕೂಡ ಭಜನಾ ಕಾರ್ಯಕ್ರಮವನ್ನು ಪ್ರೋತ್ಸಾಹಿಸುತ್ತಿದ್ದಾರೆ. ನಿಸರ್ಗದ ಮಡಿಲಿನಲ್ಲಿ ಮಕ್ಕಳಿಂದ ನಡೆಯುವ ಭಜನಾ ಕಾರ್ಯಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ.
Kshetra Samachara
04/10/2022 05:44 pm