ಮಂಗಳೂರು: ಸ್ಮಾರ್ಟ್ ನಗರಿ ಮಂಗಳೂರಿನ ವೃತ್ತಗಳು ಸ್ಮಾರ್ಟ್ ಸಿಟಿ ವತಿಯಿಂದ ಹೊಸರೂಪ ಪಡೆದು ಸೋಮವಾರ ಸಂಜೆ ಎರಡು ವೃತ್ತಗಳು ಅನಾವರಣಗೊಂಡಿದೆ. ಲೇಡಿಹಿಲ್‌ನ ವೃತ್ತವು ಬ್ರಹ್ಮಶ್ರೀ ನಾರಾಯಣ ಗುರು ವೃತ್ತವಾಗಿ ಹಾಗೂ ಮಂಗಳಾದೇವಿ ದೇವಸ್ಥಾನದ ಮುಂಭಾಗದ ಮಾರ್ನಮಿಕಟ್ಟೆ ವೃತ್ತವು ಶಾಸಕ ವೇದವ್ಯಾಸ ಕಾಮತ್ ಅವರ ಮುತುವರ್ಜಿಯಿಂದ ನಿರ್ಮಾಣಗೊಂಡಿದೆ.
ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ಲೇಡಿಹಿಲ್ ಬ್ರಹ್ಮಶ್ರೀ ನಾರಾಯಣ ಗುರು ವೃತ್ತ ನಿರ್ಮಾಣಗೊಂಡಿದೆ. ಕೇವಲ ಎರಡೇ ತಿಂಗಳಲ್ಲಿ ಈ ವೃತ್ತದ ಕಾರ್ಯ ಸಂಪೂರ್ಣಗೊಂಡಿದೆ. ವೃತ್ತದೊಳಗೆ 4 ಅಡಿ ಎತ್ತರದ ಮೂರುವರೆ ಅಡಿ ಅಗಲದ ನಾರಾಯಣ ಗುರುಗಳ ಕಂಚಿನ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ. 220 ಕೆಜಿ ತೂಕದ ಪ್ರತಿಮೆಗೆ ಸುಂದರ ಮಂಟಪ, ಸುತ್ತಲೂ ಗಾರ್ಡನ್ ಹಾಗೂ ಕಾರಂಜಿ ವ್ಯವಸ್ಥೆ ಮಾಡಲಾಗಿದೆ.
ಮಂಗಳಾದೇವಿ ದೇವಿ ದೇವಸ್ಥಾನದ ಮುಂಭಾಗದ ಮಾರ್ನಮಿಕಟ್ಟೆ ಸರ್ಕಲ್‌ಗೆ ಮೂರು ಸಿಂಹಗಳಿಂದ ಕಂಗೊಳಿಸುವ ಸರ್ಕಲ್ ಅನಾವರಣಗೊಂಡಿದೆ. ಮಂಗಳಾದೇವಿಯ ವಾಹನವಾದ ಸಿಂಹದ ಕಲ್ಪನೆಯನ್ನು ಇರಿಸಿಕೊಂಡು ಈ ಸರ್ಕಲ್‌ಗೂ ಧಾರ್ಮಿಕ ಟಚ್ ನೀಡಲಾಗಿದೆ. ಈಗಾಗಲೇ ಈ ಸರ್ಕಲ್ ಸ್ಮಾರ್ಟ್ ಸಿಟಿ ವತಿಯಿಂದ ನಿರ್ಮಾಣಗೊಂಡಿದೆ. ಈ ಸರ್ಕಲ್‌ಗೆ ಹೊಸ ಟಚ್ ನೀಡುವ ಹಿನ್ನೆಲೆಯಲ್ಲಿ ವಿನೂತನ ಪರಿಕಲ್ಪನೆಯಲ್ಲಿ ಸರ್ಕಲ್ ಅನ್ನು ಅಭಿವೃದ್ಧಿಗೊಳಿಸಲಾಗಿದೆ. ಒಟ್ಟಿನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳಿಂದ ಸ್ಥಾಪನೆಗೊಂಡ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಾಲಯಕ್ಕೆ ಪ್ರವೇಶಿಸುವಲ್ಲಿರುವ ಲೇಡಿಹಿಲ್ ನಲ್ಲಿ ನಾರಾಯಣ ಗುರು ಸರ್ಕಲ್ ಆಗಿ ಕಂಗೊಳಿಸಿದರೆ, ಮಂಗಳಾದೇವಿ ಸರ್ಕಲ್ ಸಿಂಹಗಳ ಗಾಂಭೀರ್ಯ ನಿಲುವಿನಿಂದ ಕಂಗೊಳಿಸಲಿದೆ. ಇದು ಎರಡೂ ಕಡೆಗಳಿಗೆ ಪ್ರವೇಶಿಸುವ ಭಕ್ತರನ್ನು ಆಪ್ಯಾಯಮಾನವಾಗಿ ಸೆಳೆಯಲಿದೆ.
Kshetra Samachara
04/10/2022 12:59 pm