ಕಾಪು : ಶರನ್ನವರಾತ್ರಿ ಮಹೋತ್ಸವ - ದಸರಾ ಸಂಭ್ರಮಾಚರಣೆಯ ಪ್ರಯುಕ್ತ ರಕ್ಷಣಾಪುರ ಜವನೆರ್‍ನ ಕೂಟ ಕಾಪು ಇವರ ವತಿಯಿಂದ ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಬಳಿಯಲ್ಲಿರುವ ಬಂಟರ ಸಂಘದ ಮುಂಭಾಗದಲ್ಲಿ ಕಾಪು ಪಿಲಿ ಪರ್ಬ ಎಂಬ ಶೀರ್ಷಿಕೆಯಡಿಯಲ್ಲಿ ಅ. 4 ರಂದು ಮಧ್ಯಾಹ್ನ 2 ಗಂಟೆಯಿಂದ ಹುಲಿ ವೇಷ ಸ್ಪರ್ಧೆ ನಡೆಯಲಿದೆ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು.
ಕಾಪು ರಾಜೀವ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹುಲಿ ವೇಷ ಸ್ಪರ್ಧೆಯ ಲಾಂಛನ ಬಿಡುಗಡೆಗೊಳಿಸಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಉಡುಪಿ, ದಕ್ಷಿಣ ಕನ್ನಡ ಸಹಿತ ವಿವಿಧೆಡೆಯ ತಂಡಗಳು ಮುಕ್ತವಾಗಿ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದ್ದು ಈಗಾಗಲೇ ಹತ್ತಕ್ಕೂ ಹೆಚ್ಚು ತಂಡಗಳು ಹೆಸರು ನೋಂದಾಯಿಸಿವೆ. ಸೆ.30 ರವರೆಗೆ ನೋಂದಾವಣೆಗೆ ಅವಕಾಶವಿದ್ದು ಇನ್ನಷ್ಟು ತಂಡಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದರು.
ತುಳುನಾಡಿನ ಜನಪದ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸುವ ಉದ್ದೇಶದೊಂದಿಗೆ ಹುಲಿ ವೇಷ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ತಂಡಗಳಿಗೆ 30 ನಿಮಿಷಗಳ ಕಾಲಾವಕಾಶ ನೀಡಲಾಗುತ್ತಿದ್ದು ಒಂದು ತಂಡದಲ್ಲಿ ಗರಿಷ್ಠ 15 ಮಂದಿಗೆ ಮಾತ್ರ ಪಾಲ್ಗೊಳ್ಳಲು ಅವಕಾಶವಿದೆ. ವಿಜೇತ ತಂಡಗಳಿಗೆ ಪ್ರಥಮ 1ಲಕ್ಷ ರೂ., ದ್ವಿತೀಯ 50ಸಾವಿರ ರೂ. ಹಾಗೂ ವೈಯಕ್ತಿಕ ಬಹುಮಾನಗಳನ್ನು ನೀಡಲಾಗುವುದು.
ಸುದ್ದಿಗೋಷ್ಠಿಯಲ್ಲಿ ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್‌ಚಂದ್ರ ಸುವರ್ಣ, ಕಾಪು ರಕ್ಷಣಾಪುರ ಜವನೆರ್‍ನ ಕೂಟದ ಅಧ್ಯಕ್ಷ ನವೀನ್ ಶೆಟ್ಟಿ ಪಡುಬಿದ್ರಿ, ಸಂಚಾಲಕರಾದ ಹರೀಶ್ ನಾಯಕ್, ಗಣೇಶ್ ಕೋಟ್ಯಾನ್, ಅಖಿಲೇಶ್ ಕೋಟ್ಯಾನ್, ರಮೀಜ್ ಪಡುಬಿದ್ರಿ, ಸೌರಭ್ ಬಲ್ಲಾಳ್, ಶರ್ಫುದ್ದೀನ್ ಶೇಖ್, ಜಿತೇಂದ್ರ ಪುರ್ಟಾಡೋ, ಲಕ್ಷ್ಮೀಶ ತಂತ್ರಿ, ಮೊದಲಾದವರು ಉಪಸ್ಥಿತರಿದ್ದರು.
Kshetra Samachara
25/09/2022 03:00 pm