ಮಂಗಳೂರು: ಭಾರತದ ಜನರನ್ನು ಕಾಡುವ ಹಲವು ಗಂಭೀರ ಸಮಸ್ಯೆಗಳನ್ನು ಈಡೇರಿಸುವ ಭರವಸೆಯನ್ನು ಮುಂದಿಟ್ಟು ಅಧಿಕಾರದ ಗದ್ದುಗೆಯನ್ನೇರಿದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಯಾವೊಂದು ಭರವಸೆಗಳನ್ನು ಈಡೇರಿಸದೆ ಕನಿಷ್ಠ ನೆಮ್ಮದಿಯಿಂದ ಬದುಕು ನಡೆಸಲಾಗದಂತಹ ಸ್ಥಿತಿಗೆ ಈ ದೇಶದ ಜನರನ್ನು ತಂದು ನಿಲ್ಲಿಸಿದ್ದಾರೆ. ಇವತ್ತು ನಮ್ಮ ಬಡತನವನ್ನು, ಅಸಹಾಯಕತೆಯನ್ನು ಅವಹೇಳನ ಮಾಡುವ ಪರಿಸ್ಥಿತಿ ನಿರ್ಮಾಣಗೊಂಡಿದೆ ಎಂದು ಸಿಪಿಐಎಂ ಪಕ್ಷದ ರಾಜ್ಯ ಸಮಿತಿ ಸದಸ್ಯ ಮುನೀರ್ ಕಾಟಿಪಳ್ಳ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಕೇಂದ್ರ, ರಾಜ್ಯ ಸರಕಾರದ ಜನವಿರೋಧಿ ನೀತಿಗಳನ್ನು ವಿರೋಧಿಸಿ, ವಿಪರೀತ ಬೆಲೆ ಏರಿಕೆ, ನಿರುದ್ಯೋಗ, ಹಣದುಬ್ಬರ, ದೇಶದ ಸಂಪತ್ತಿನ ಲೂಟಿ ಮತ್ತು ಭ್ರಷ್ಟಾಚಾರ ವಿರೋಧಿಸಿ ಸಿಪಿಐಎಂ ರಾಜ್ಯವ್ಯಾಪಿ ಕರೆ ನೀಡಿದ ರಾಜಕೀಯ ಪ್ರಚಾರಾಂದೋಲನದ ಭಾಗವಾಗಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಜೆ ಬಾಲಕೃಷ್ಣ ಶೆಟ್ಟಿ, ಸುನೀಲ್ ಕುಮಾರ್ ಬಜಾಲ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಸಭೆಯಲ್ಲಿ ಸಿಪಿಐಎಂ ನಗರ ಸಮಿತಿ ಸದಸ್ಯರಾದ ಲೋಕೇಶ್ ಎಂ, ಸುರೇಶ್ ಬಜಾಲ್, ಪ್ರದೀಪ್, ಭಾರತೀ ಬೋಳಾರ ,ದಿನೇಶ್ ಶೆಟ್ಟಿ, ಕಾರ್ಮಿಕ ಮುಖಂಡರಾದ ಮುಸ್ತಫಾ ಕಲ್ಲಕಟ್ಟೆ, ಡಿವೈಎಫ್ಐ ಜಿಲ್ಲಾ ಮುಖಂಡರಾದ ಬಿ.ಕೆ ಇಮ್ತಿಯಾಜ್ ಮುಂತಾದವರು ಉಪಸ್ಥಿತರಿದ್ದರು.
ಸಿಪಿಐಎಂ ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸಂತೋಷ್ ಬಜಾಲ್ ಅಧ್ಯಕ್ಷತೆ ವಹಿಸಿ, ಸಿಪಿಐಎಂ ನಗರ ಸಮಿತಿ ಮುಖಂಡರಾದ ಯೋಗೀಶ್ ಜಪ್ಪಿನಮೊಗರು ಸ್ವಾಗತಿಸಿ, ಜಯಂತಿ ಬಿ ಶೆಟ್ಟಿ ವಂದಿಸಿದರು.
Kshetra Samachara
24/09/2022 07:34 am