ಉಡುಪಿ: ಎಲ್ಲಾ ಧರ್ಮಗಳು ಮನುಷ್ಯನ ಒಳಿತನ್ನೇ ಬಯಸುತ್ತವೆ ಎಂಬ ನಾರಾಯಣಗುರುಗಳ ಸಂದೇಶ ಅರಿಯುವ ಮೂಲಕ ವಿಶ್ವದಾದ್ಯಂತ ವಿವಿಧ ಧರ್ಮಗಳ ನಡುವೆ ನಡೆಯುತ್ತಿರುವ ವಾದವನ್ನು ಕೊನೆಗಾಣಿಸಿ,ವಿಶ್ವಶಾಂತಿ ನಿರ್ಮಾಣಕ್ಕೆ ಎಲ್ಲರೂ ಮುಂದಾಗಬೇಕು ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ಹೇಳಿದರು.
ಅವರು ಜನ್ನಂಜೆಯ ನಾರಾಯಣಗುರು ಸಭಾಭವನದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮತ್ತು ಬಿಲ್ಲವರ ಸೇವಾ ಸಂಘ (ರಿ) ಬನ್ನಂಜೆ ಅವರ ಸಹಯೋಗದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮತನಾಡಿದರು.ಧರ್ಮಗಳ ಮೂಲ ಉದ್ದೇಶ ಮನುಷ್ಯನಿಗೆ ಒಳಿತನ್ನು ಮಾಡುವ ಮೂಲಕ ವಿಶ್ವಶಾಂತಿ ಮೂಡಿಸುವುದು ಮಾತ್ರವಾಗಿದ್ದು, ಧರ್ಮಗಳ ನಡುವೆ ವಾದ ಸೃಷ್ಠಿಸಲು ಅಥವಾ ವಿಜಯ ಸಾಧಿಸುವುದಲ್ಲ ಎಂಬ ನಾರಾಯಣ ಗುರುಗಳ ಸಂದೇಶವನ್ನು ಅರ್ಥಮಾಡಿಕೊಂಡು ಆ ಧರ್ಮದ ನೆಲೆಯಲ್ಲಿ ಎಲ್ಲರೂ ನಡೆಯುವುದು ಇಂದಿನ ಪ್ರಸ್ತುತ ಅಗತ್ಯವಾಗಿದೆ. ಶಿಕ್ಷಣದ ಮೂಲಕ ಬಲಯುತವಾಗಿ ಎಂಬ ಅವರ ಸಂದೇಶದಂತೆ ಎಲ್ಲರೂ ಉತ್ತಮ ಶಿಕ್ಷಣ ಪಡೆಯಬೇಕು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ರಾಜ್ಯದ ಎಲ್ಲಾ ದಾರ್ಶನಿಕರ ಮತ್ತು ಮಹನೀಯರ ರಾಜ್ಯಮಟ್ಟದ ಜಯಂತಿಗಳನ್ನು ಬೆಂಗಳೂರಿಗೆ ಮಾತ್ರ ಸೀಮಿತಗೊಳಿಸದೇ , ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ನಡೆಸಲು ತೀರ್ಮಾನಿಸಲಾಗಿದ್ದು, ಈ ಬಾರಿಯ ನಾರಾಯಣ ಗುರು ಜಯಂತಿಯ ರಾಜ್ಯಮಟ್ಟದ ಕಾರ್ಯಕ್ರಮವನ್ನು ಮಂಗಳೂರಿನಲ್ಲಿ ನಡೆಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ನಾರಾಯಣ ಗುರುಗಳು ಸಂದೇಶ ಮತ್ತು ಆದರ್ಶಗಳು ಇಂದಿಗೂ ಪ್ರಸ್ತುತವಾಗಿದ್ದು ಸಮಾಜದಲ್ಲಿ ಸಮಾನತೆಯ ನಿರ್ಮಾಣಕ್ಕೆ ಅತ್ಯಂತ ಅಗತ್ಯವಾಗಿದೆ. ವ್ಯಕ್ತಿಯನ್ನು ಯಾವುದೇ ಜಾತಿಯಿಂದ ಅಳೆಯದೇ ಆತನ ವ್ಯಕ್ತಿತ್ವದಿಂದ ಗುರುತಿಸಬೇಕು, ಒಂದೇ ಜಾತಿ ಒಂದೇ ಮತ ಎಂಬ ಸಂದೇಶವನ್ನು ಎಲ್ಲರೂ ಪಾಲಿಸಬೇಕು ಎಂದರು.
Kshetra Samachara
10/09/2022 05:59 pm