ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಒಳ್ಳೆಯ ಅಧ್ಯಾಪಕ ಉತ್ತಮ ಶಿಕ್ಷಣ ಸಂಸ್ಥೆ ಕಟ್ಟಲು ಸಾಧ್ಯ; ಪ್ರೊ. ಬಿ.ಎ. ವಿವೇಕ ರೈ

ಮಂಗಳೂರು: ಓರ್ವ ಒಳ್ಳೆಯ ಅಧ್ಯಾಪಕನಿಂದ ಮಾತ್ರ ಉತ್ತಮ ಶಿಕ್ಷಣ ಸಂಸ್ಥೆಯನ್ನು ಕಟ್ಟಲು ಸಾಧ್ಯ. ಶಿಕ್ಷಣ ಸಂಸ್ಥೆಯು ಯಾವುದೇ ಕಾನೂನಿಗೆ ಒಳಪಡದೆ ಬದುಕು ಕಟ್ಟುವ ಕ್ರಿಯೆಯಾಗಿರಬೇಕು. ಅಲ್ಲಿ ಕೇವಲ ಭೌತಿಕ ಅನುಕೂಲಗಳಿದ್ದರೆ ಸಾಲದು ಅಲ್ಲಿ ಬೌದ್ಧಿಕತೆ ಬೆಳೆಸಬೇಕು ಎಂದು ತುಳು ಕನ್ನಡ ವಿದ್ವಾಂಸ ಹಾಗೂ ವಿಶ್ರಾಂತ ಕುಲಪತಿ ಪ್ರೊ. ಬಿ.ಎ. ವಿವೇಕ ರೈ ಹೇಳಿದ್ದಾರೆ.

ಅನೇಕಾಂತ ಪ್ರತಿಷ್ಠಾನ, ಆಕೃತಿ ಆಶಯ ಪಬ್ಲಿಕೇಶನ್ ಆಶ್ರಯದಲ್ಲಿ ಡಾ. ಉದಯ ಕುಮಾರ್ ಇರ್ವತ್ತೂರು ಅವರ 'ಗೆಲುವಿನ ದುಃಖ ಮತ್ತು ಸೋಲಿನ ಸುಖ' ಕೃತಿಯನ್ನು ನಗರದ ಸಹೋದಯ ಸಭಾಂಗಣದಲ್ಲಿ ಅವರು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಶಿಕ್ಷಣದ ಅಧಃಪತನದ ಕ್ಷಣಗಳು ನಿಧಾನಕ್ಕೆ ಗೋಚರವಾಗುತ್ತಿದ್ದು, ಭ್ರಷ್ಟತೆ ಹಾಗೂ ಪ್ರಚಾರ ಪ್ರಿಯತೆ ಹೆಚ್ಚುತ್ತಿದೆ. ಕಳೆದ 15 ವರ್ಷಗಳಿಂದ ಇತ್ತೀಚೆಗೆ ಶಿಕ್ಷಣದಲ್ಲಿ ರಾಜಕೀಯ ಹಸ್ತಕ್ಷೇಪ ಹೆಚ್ಚಾಗುತ್ತಿದೆ. ಎಡ, ಬಲ ಎಂಬ ಚಿಂತನೆಗಳ ನಡುವೆ ಶಿಕ್ಷಣ ಸಂಸ್ಥೆಗಳು, ಅದನ್ನು ಮುನ್ನಡೆಸುವ ಮುಖ್ಯಸ್ಥರು ಕೂಡಾ ಇಕ್ಕಟ್ಟಿನ ಪರಿಸ್ಥಿತಿಯನ್ನು ಅನುಭವಿಸುತ್ತಿದೆ. ಆದರೆ ನಾವು ಯಾರ ಕಡೆಯೂ ವಾಲಬೇಕಾಗಿಲ್ಲ. ನೈತಿಕೆಯನ್ನು ಉಳಿಸಿಕೊಳ್ಳಬೇಕಾಗಿದೆ. ಶಿಕ್ಷಣ ಸಂಸ್ಥೆಗಳು ಬರಿಯ ಕಟ್ಟಡಗಳಾಗಿರದೆ ಅವುಗಳು ವಿದ್ಯಾರ್ಥಿ ಕೇಂದ್ರೀಕೃತವಾಗಿರಬೇಕು ಎಂದರು.

ಕೃತಿ ಪರಿಚಯ ಮಾಡಿ ಡಾ. ನರೇಂದ್ರ ರೈ ದೇರ್ಲ ಮಾತನಾಡಿ, ಡಾ. ಉದಯ ಕುಮಾರ್ ಶಿಕ್ಷಣ ಸಂಸ್ಥೆಯೊಂದರ ಮುಖ್ಯಸ್ಥರಾಗಿ ಅನುಭವಿಸಿದ ನೋವು, ಹತಾಶೆ, ಭಯ, ಸಂತಸಗಳ ಸಮ್ಮಿಲನವನ್ನು ಒಳಗೊಂಡು ಮೂಡಿಬಂದಿರುವುದೇ 'ಗೆಲುವಿನ ದುಃಖ ಸೋಲಿನ ಸುಖ' ಕೃತಿ. ಪುಸ್ತಕದಲ್ಲಿ ವೇದನೆ ಬಹಳವಿದ್ದರೂ, ಅದಕ್ಕಿಂತ ಹೆಚ್ಚಾಗಿ ನಿವೇದನೆ ಇದೆ. ತಮ್ಮ ಐದಾರು ವರ್ಷಗಳ ಕಾಲೇಜು ಜೀವನದ ಒಳಗಡೆ ತಾನು ಅನುಭವಿಸಿದ ವೇದನೆಯನ್ನು ಅವರು ಎಳೆ ಎಳೆಯಾಗಿ ತೆರೆದಿಟ್ಟಿದ್ದಾರೆ ಎಂದು ಹೇಳಿದರು.

Edited By : Vijay Kumar
Kshetra Samachara

Kshetra Samachara

28/08/2022 10:59 pm

Cinque Terre

2.78 K

Cinque Terre

0