ಮುಲ್ಕಿ: ನಗರ ಪಂಚಾಯತ್ ವತಿಯಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮದ ಅಂಗವಾಗಿ ಕಾರ್ನಾಡು ಗಾಂಧಿ ಮೈದಾನದಲ್ಲಿ ಮುಲ್ಕಿ ಮೂಡಬಿದ್ರೆ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಧ್ವಜಾರೋಹಣ ನೆರವೇರಿಸಿದರು.
ಈ ವೇಳೆ ಮಾತನಾಡಿ, ಮುಲ್ಕಿ ತಾಲೂಕಿಗೆ ಆಡಳಿತ ಸೌಧಕ್ಕೆ ಇದೇ ಆ. 23ರಂದು ಸಚಿವ ಸೋಮಣ್ಣ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಅದೇ ದಿನ ಎರಡು ಕೋಟಿ ವೆಚ್ಚದಲ್ಲಿ ಪ್ರವಾಸಿ ಮಂದಿರ ಶಿಲಾನ್ಯಾಸಕ್ಕೆ ಸಚಿವ ಸಿಸಿ ಪಾಟೀಲ್ ಆಗಮಿಸುವ ನಿರೀಕ್ಷೆಯಿದೆ. ಮುಲ್ಕಿಗೆ ಅಗ್ನಿಶಾಮಕ ದಳಕ್ಕೆ ಸರಕಾರದಿಂದ ಜಾಗ ಮಂಜೂರಾಗಿದ್ದು, ಕೃಷಿಗೆ ಅನುಕೂಲವಾಗಿ ಕೃಷಿ ಸಂಪರ್ಕ ಕೇಂದ್ರ ಹಾಗೂ ನಗರ ಪಂಚಾಯತ್ ವ್ಯಾಪ್ತಿಯಲ್ಲಿ 21 ಕಾಮಗಾರಿಗಳಿಗೆ ಮಂಜೂರಾತಿ ನೀಡಲಾಗಿದೆ. ಎಂಆರ್‌ಪಿಎಲ್‌ನ ಒಂದು ಕೋಟಿ ಅನುದಾನದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ಕಟ್ಟಡ ಕಾಮಗಾರಿ ನಡೆದಿದೆ. ಮುಲ್ಕಿ ಅಭಿವೃದ್ಧಿಗೆ ಪೂರಕ ಯೋಜನೆಗಳು ಸಾಕಾರಗೊಂಡಿದೆ ಎಂದು ಹೇಳಿದರು.
ನಗರ ಪಂಚಾಯತ್ ಅಧ್ಯಕ್ಷ ಸುಭಾಷ್ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿದ್ದು, ಉಪತಹಶೀಲ್ದಾರ್ ಕಮಲಮ್ಮ, ಪೊಲೀಸ್ ಠಾಣಾಧಿಕಾರಿ ಕುಸುಮಾಧರ ಡಿ, ನ ಪಂ ಉಪಾಧ್ಯಕ್ಷ ಸತೀಶ್ ಅಂಚನ್, ಸದಸ್ಯರು ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ವೇತನ ವಿತರಣೆ, ಮನೆ ರಿಪೇರಿ, ಶೌಚಾಲಯ ನಿರ್ಮಾಣ ಮತ್ತು ವಿಕಲಚೇತನರಿಗೆ ಪೋಷಣಾ ಭತ್ಯೆ ಸಹಾಯ ಧನ ಹಕ್ಕು ಪತ್ರ ವಿತರಿಸಲಾಯಿತು. ಅಂಬೇಡ್ಕರ್ ಮತ್ತು ವಾಜಪೇಯಿ ನಗರ ವಸತಿ ಯೋಜನೆಯಡಿ ಮನೆ ಮಂಜೂರಾತಿ ಆದೇಶ ಪತ್ರ ನೀಡಲಾಯಿತು. ಮುಲ್ಕಿ ಪೊಲೀಸರು ಹಾಗೂ ವಿವಿಧ ಸಂಘ-ಸಂಸ್ಥೆಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು.
Kshetra Samachara
15/08/2022 02:44 pm