ಸುಳ್ಯ: ಆಚರಣೆಗಳಿಂದ ಮಾತ್ರ ನಮ್ಮ ಭಾಷೆ, ಸಂಸ್ಕೃತಿ, ಪರಂಪರೆ ಉಳಿಯಲು ಸಾಧ್ಯ. ಸಂಪ್ರದಾಯ, ಪರಂಪರೆ ಭಾಷೆ ನಮ್ಮ ಬದುಕಿನ ಭಾಗವಾದಾಗ ಮಾತ್ರ ಅದು ಇನ್ನಷ್ಟು ಬೆಳೆಯುತ್ತದೆ ಎಂದು ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಹಾಗು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್‌ನ ಪ್ರಧಾನ ಕಾರ್ಯದರ್ಶಿ ಡಾ.ಕೆ.ವಿ ರೇಣುಕಾಪ್ರಸಾದ್ ಹೇಳಿದ್ದಾರೆ.
ಸುಳ್ಯ ಗೌಡರ ಯುವ ಸೇವಾ ಸಂಘ ,ಕೊಡಗು ಗೌಡ ಯುವ ವೇದಿಕೆ ಮತ್ತು ಆಂಗಿಕ ಮಲ್ಟಿ ಮೀಡಿಯಾ ಇದರ ಸಹಯೋಗದಲ್ಲಿ ರಂಗ
ಮಯೂರಿ ಕಲಾ ಶಾಲೆಯಲ್ಲಿ ಆ.7ರಂದು ನಡೆದ 3 ನೇ ವರ್ಷದ ವಿಶ್ವ ಅರೆಭಾಷೆ ಹಬ್ಬವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಎಲ್ಲರೂ ಒಟ್ಟಾಗಿ ಸೇರಿ ಈ ರೀತಿಯ ಕಾರ್ಯಕ್ರಮ ಮಾಡಿದರೆ ನಮ್ಮ ಆಚಾರ, ವಿಚಾರಗಳು, ಸಂಪ್ರದಾಯ, ಪದ್ದತಿಗಳು ಮತ್ತು ಭಾಷೆ ಮುಂದಿನ ತಲೆ ಮಾರಿಗೆ ಹಸ್ತಾಂತರ ಆಗಲು ಸಾಧ್ಯ. ಈ ನಿಟ್ಟಿನಲ್ಲಿ ವಿಶ್ವ ಅರೆಭಾಷೆ ಹಬ್ಬ ಆಚರಣೆ ಶ್ಲಾಘನೀಯ ಕಾರ್ಯಕ್ರಮ ಎಂದು ಹೇಳಿದರು. ಅರೆ ಭಾಷೆಯ ಮಹತ್ವದ ಕುರಿತು ಉಪನ್ಯಾಸ ನೀಡಿದ ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳ ಭಾಷೆಯನ್ನು ಮಾತನಾಡಬೇಕು, ಬರೆಯಬೇಕು, ಓದಬೇಕು ಮತ್ತು ಅದನ್ನು ವಿಮರ್ಶೆ ಮಾಡಬೇಕು ಆಗ ಮಾತ್ರ ಅರೆ ಭಾಷೆ ಬೆಳೆಯಲು ಸಾಧ್ಯ ಎಂದು ಹೇಳಿದರು. ಭಾಷೆಯ ಬಳಕೆ ಮತ್ತು ನಿರ್ವಹಣೆಯು ಚೆನ್ನಾಗಿದ್ದರೆ ಆ ಭಾಷೆಗೆ ಭವಿಷ್ಯ ಇದೆ. ಈ ನಿಟ್ಟಿನಲ್ಲಿ ಅರೆಭಾಷೆಗೆ ಉಜ್ವಲ ಭವಿಷ್ಯ ಇದೆ. ಹೊಸ ಪದಗಳ ಬಳಕೆಯ ಮೂಲಕ ಭಾವನೆಗಳನ್ನು ಅಭಿವ್ಯಕ್ತಪಡಿಸಿದರೆ ಭಾಷೆಯ ಬೆಳವಣಿಗೆಗೆ ಪೂರಕ ಎಂದು ಅವರು ಅಭಿಪ್ರಾಯಪಟ್ಟರು.
ಸುಳ್ಯ ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಚಂದ್ರ ಕೋಲ್ಚಾರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹಿರಿಯ ಪತ್ರಕರ್ತ ಡಾ. ಯು.ಪಿ.ಶಿವಾನಂದ, ಕೊಡಗು ಗೌಡ ಯುವ ವೇದಿಕೆ ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ ಕುಕ್ಕೇರ ಲಕ್ಷ್ಮಣ್, ಗೌಡ ಯುವ ಸೇವಾ ಸಂಘದ ಮಾಜಿ ಅಧ್ಯಕ್ಷ ದಿನೇಶ್ ಮಡಪ್ಪಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
Kshetra Samachara
07/08/2022 07:06 pm