ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಸ್ವಧರ್ಮವನ್ನು ಗೌರವಿಸುವುದರ ಜೊತೆಗೆ ಇತರ ಧರ್ಮವನ್ನು ಗೌರವಿಸುವುದೇ ನಿಜವಾದ ಧರ್ಮ:ರಾಧಾಕೃಷ್ಣ ಶ್ರೀಯಾನ್

ಉಡುಪಿ : ನಮ್ಮ ಧರ್ಮವನ್ನು ಗೌರವಿಸುವುದರ ಜೊತೆಗೆ ಇತರ ಧರ್ಮವನ್ನು ಗೌರವಿಸುವುದೇ ನಿಜವಾದ ಧರ್ಮ. ಇದನ್ನು ಉದ್ಯಾವರದ ಜನತೆ ಪಾಲಿಸುತ್ತಿದ್ದಾರೆ. ಇಂತಹ ಅದ್ಬುತ ಸಂಸ್ಕೃತಿಯನ್ನು ನಮ್ಮ ಹಿರಿಯರು ನಮಗೆ ಕಲಿಸಿಕೊಟ್ಟಿದ್ದಾರೆ ಎಂದು ಉದ್ಯಾವರ ಗ್ರಾಮ ಪಂಚಾಯತ್ ಅಧ್ಯಕ್ಷ ರಾಧಾಕೃಷ್ಣ ಶ್ರೀಯಾನ್ ಹೇಳಿದರು.

ಸಂತ ಫ್ರಾನ್ಸಿಸ್ ಝೇವಿಯರ್ ದೇವಾಲಯದ ವ್ಯಾಪ್ತಿಯ ಸೌಹಾರ್ದ ಸಮಿತಿ ನೇತೃತ್ವದಲ್ಲಿ ಸರ್ವಧರ್ಮೀಯರ ಸಹಕಾರದೊಂದಿಗೆ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಕಾರ್ಯಾಲಯದಲ್ಲಿ ನಡೆದ ಬಕ್ರೀದ್ ಸೌಹಾರ್ದ ಕೂಟದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಭಾಗವಹಿಸಿ ಮಾತನಾಡಿದರು.

ಕೊರೋನಾ ಸಂದರ್ಭದಲ್ಲಿ ಸರ್ವಧರ್ಮೀಯ ಯುವಕರು ಜಾತಿ ಮತ ಭೇದವಿಲ್ಲದೆ ನೀಡಿದ ಸೇವೆಯನ್ನು ನಾವು ಗಮನಿಸಿದ್ದೇವೆ. ಇಂತಹ ಸೇವೆಯನ್ನು ಮರೆಯಲು ಅಸಾಧ್ಯ. ತುಳುನಾಡಿನಲ್ಲಿ ಸೌಹಾರ್ದತೆಗೆ ವಿಶೇಷ ಗೌರವವಿದೆ. ಶ್ರೀ ನಾರಾಯಣ ಗುರು ಮತ್ತು ಬಪ್ಪಬ್ಯಾರಿಯ ಪ್ರಸಿದ್ಧತೆಯನ್ನು ನಾವೆಲ್ಲ ಚರಿತ್ರೆಯಲ್ಲಿ ಕಂಡಿದ್ದೇವೆ. ಸೌಹಾರ್ದತೆಯ ನಿಜವಾದ ಅರ್ಥವನ್ನು ತುಳುನಾಡಿಗೆ ಅವರು ನೀಡಿದ್ದಾರೆ ಎಂದರು.ಖ್ಯಾತ ಸಾಹಿತಿ ಡಾ. ಕೆ. ಪಿ. ಮಹಾಲಿಂಗು ಕಲ್ಕುಂಡ ಮಾತನಾಡುತ್ತಾ, ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರನ್ನು ಸ್ಮರಿಸುತ್ತಾ, ಜಾತಿ ಮತ ಬದಿಗಿಟ್ಟು ದೇಶವನ್ನು ಜೊತೆಯಾಗಿ ಕಟ್ಟೋಣ. ನಾವು ವಿದ್ಯಾವಂತರಾದರೆ ಜಾತಿ ಧರ್ಮದ ಸಂಘರ್ಷ ವಾಗುವುದಿಲ್ಲ. ವಿದ್ಯಾವಂತರಾದರೆ ನಮ್ಮ ಜೀವನಶೈಲಿಯೂ ಬದಲಾಗುತ್ತದೆ ಮತ್ತು ನಮಗೆ ತಿಳುವಳಿಕೆ ಬರುತ್ತದೆ ಎಂದರು.

ಸಂತ ಫ್ರಾನ್ಸಿಸ್ ಝೇವಿಯರ್ ದೇವಾಲಯದ ಪ್ರಧಾನ ಧರ್ಮಗುರು ಅ. ವಂ. ಫಾ. ಸ್ಟ್ಯಾನಿ ಬಿ. ಲೋಬೊ ಮಾತನಾಡುತ್ತಾ, ನಾವೆಲ್ಲ ಒಂದೇ ತಾಯಿಯ ಮಕ್ಕಳು. ನಮ್ಮ ಜೀವನದಲ್ಲಿ ನಾವು ಒಬ್ಬರಿಗೊಬ್ಬರು ಸಹಾಯ ಮಾಡಿದರೆ ನಮ್ಮ ಸಮಾಜ ಉನ್ನತ ಹಂತಕ್ಕೆ ಏರುತ್ತದೆ. ಸೌಹಾರ್ದ ಸಮಿತಿ ಗಳು ಇರುವುದರಿಂದ ಸಮಾಜದಲ್ಲಿ ಸೌಹಾರ್ದತೆ ಮೂಡಲು ಕಾರಣ ಎಂದರು.

ಹಲೀಮಾ ಸಾಬ್ಜು ಅಡಿಟೋರಿಯಂ ಉದ್ಯಾವರ ಇದರ ನಿರ್ದೇಶಕರಾದ ಜನಾಬ್ ಹಾಜಿ ಅಬ್ದುಲ್ ಜಲೀಲ್ ಸಾಹೇಬ್ ಮತ್ತು ಉದ್ಯಾವರ ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷ ರಿಯಾಝ್ ಪಳ್ಳಿ ಶುಭಹಾರೈಸಿದರು.

ಸೌಹಾರ್ದ ಸಮಿತಿ ಅಧ್ಯಕ್ಷ ವಿಲ್ಫ್ರೆಡ್ ಡಿಸೋಜ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಆಬಿದ್ ಅಲಿ ಸ್ವಾಗತಿಸಿದರೆ, ರೋಯ್ಸ್ ಫೆರ್ನಾಂಡಿಸ್ ಧನ್ಯವಾದ ಸಮರ್ಪಿಸಿದರು. ಕೋಶಾಧಿಕಾರಿ ಪ್ರತಾಪ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

Edited By : PublicNext Desk
Kshetra Samachara

Kshetra Samachara

13/07/2022 08:08 pm

Cinque Terre

2.71 K

Cinque Terre

1

ಸಂಬಂಧಿತ ಸುದ್ದಿ