ಪಬ್ಲಿಕ್ ನೆಕ್ಸ್ಟ್ ವಿಶೇಷ ವರದಿ: ವಿಶ್ವನಾಥ ಪಂಜಿಮೊಗರು
ಮಂಗಳೂರು: ಇಂದಿನ ಮೊಬೈಲ್ ಯಗದಲ್ಲಿ ನಮ್ಮ ಅಂಗೈಯೊಳಗೆ ಇಡೀ ಜಗತ್ತೇ ಅಡಕವಾಗಿದೆ. ಒಂದು ಕ್ಲಿಕ್ ನಲ್ಲಿ ನಮಗೆ ಬೇಕಾದ ಎಲ್ಲವನ್ನೂ ದಕ್ಕಿಸಿಕೊಳ್ಳುವಷ್ಟು ತಂತ್ರಾಂಶ ವೇಗ ಪಡೆದಿದೆ. ಇದೀಗ ತಂತ್ರಜ್ಞಾನ ಬಳಸಿಕೊಂಡು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಪುಸ್ತಕಗಳ ಡಿಜಿಟಲೀಕರಣ ಮಾಡಿದೆ. ಈ ಮೂಲಕ ಜಗತ್ತಿನ ಯಾವ ಮೂಲೆಯಲ್ಲೂ ಕುಳಿತುಕೊಂಡು ಈ ಪುಸ್ತಕಗಳನ್ನು ಒಂದೇ ಕ್ಲಿಕ್ ನಲ್ಲಿ ಓದಬಹುದು, ಡೌನ್ಲೋಡ್ ಮಾಡಿ ಸಂಗ್ರಹಿಸಿಟ್ಟುಕೊಳ್ಳಬಹುದು.
ಹೌದು... ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆಯವರ ಮುತಾಲಿಕೆಯಲ್ಲಿ ಈ ಪುಸ್ತಕಗಳ ಡಿಜಿಟಲೀಕರಣವಾಗಿದೆ. ಪುಸ್ತಕಗಳ ಲೇಖಕರ, ಸಂಪಾದಕರ, ಪ್ರಕಾಶಕರ ಒಪ್ಪಿಗೆ ಪಡೆದು ಈ ಕಾರ್ಯ ಮಾಡಲಾಗಿದೆ. ಒಂದೂವರೆ ವರ್ಷದ ಪ್ರಯತ್ನದಿಂದ 84 ಪುಸ್ತಕಗಳು ಸಂಚಿ ಫೌಂಡೇಶನ್ ನಿಂದ ಡಿಜಿಟಲೀಕರಣಗೊಂಡಿದೆ. ಈ ಪುಸ್ತಕಗಳು ಅರೆಭಾಷೆ ಅಕಾಡೆಮಿಯ ಅಂತರ್ಜಾಲದಲ್ಲಿ Creative Commons Share Alike CC By SA ಲೈಸೆನ್ಸ್ ನಡಿ ಎಲ್ಲರಿಗೂ ಓದಲು ಲಭ್ಯವಿದೆ. ನಮಗೆ ಬೇಕಾದರೆ ಪುಸ್ತಕಗಳನ್ನು ಡೌನ್ಲೋಡ್ ಮಾಡಿಯೂ ಬಳಸಬಹುದು. ಆದರೆ, ಖಾಸಗಿ ಉದ್ದೇಶಕ್ಕೆ ಬಳಸುವಂತಿಲ್ಲ.
ಆ್ಯಂಡ್ರಾಯ್ಡ್ ಮೊಬೈಲ್, ಕಂಪ್ಯೂಟರ್, ಟ್ಯಾಬ್, ಲ್ಯಾಪ್‌ಟಾಪ್ ಬಳಕೆದಾರರು ಗೂಗಲ್ ಗೆ ಹೋಗಿ https://arebashe.sanchaya.net/ ಎಂದು ಕ್ಲಿಕ್ಕಿಸಿದರೆ ಈ ಪುಸ್ತಕಗಳೆಲ್ಲವೂ ಲಭ್ಯ. ಅಕಾಡೆಮಿ ಅಧ್ಯಕ್ಷರು ಹಾಗೂ ಸದಸ್ಯರ ಹಿತಾಸಕ್ತಿಯಿಂದ ಈ ಪುಸ್ತಕ ಎಲ್ಲರ ಉಪಯೋಗಕ್ಕೆ ದೊರಕುತ್ತಿವೆ. ಇವುಗಳಲ್ಲಿ ಸಾಕಷ್ಟು ಪುಸ್ತಕಗಳ ಪ್ರತಿ ಎಲ್ಲೂ ಲಭ್ಯವಿಲ್ಲ. ಲಭ್ಯವಿರುವ ಪುಸ್ತಕಗಳೂ ಮಾರುಕಟ್ಟೆಯಲ್ಲಿ ದೊರೆಯುತ್ತಿಲ್ಲ.
ಆದ್ದರಿಂದ ಈ ಪ್ರಯತ್ನದ ಮೂಲಕ ಅಧ್ಯಯನಶೀಲರಿಗೆ ಅಗತ್ಯದ ಪುಸ್ತಕ ಅಂಗೈಯಲ್ಲಿಯೇ ಲಭ್ಯ. ಅಂದ ಹಾಗೆ ಈ ಡಿಜಿಟಲ್ ಪುಸ್ತಕಗಳು ಜೂ. 25ರಂದು ಲೋಕಾರ್ಪಣೆಗೊಳ್ಳಲಿದೆ. ಈ ಮೂಲಕ ಅರೆಭಾಷೆ ಅಕಾಡೆಮಿ ಒಂದು ಉತ್ತಮ ಪ್ರಯತ್ನದೆಡೆಗೆ ಹೆಜ್ಜೆ ಹಾಕಿದೆ. ಇಂತಹ ಪ್ರಯತ್ನದತ್ತ ತುಳು, ಬ್ಯಾರಿ, ಕೊಂಕಣಿ ಅಕಾಡೆಮಿಗಳೂ ಚಿಂತನೆ ನಡೆಸಬೇಕಿದೆ.
PublicNext
23/06/2022 04:20 pm