ಸುರತ್ಕಲ್:ಪರಿಸರ ಸಂರಕ್ಷಣೆಯ ಜವಾಬ್ದಾರಿ ಏನು ಎಂಬುದು ಮನೆಯಿಂದಲೇ ಆರಂಭವಾಗಬೇಕು. ಸ್ವಚ್ಛತೆಯ ಬಗ್ಗೆ ವಿದ್ಯಾರ್ಥಿಗಳು ಸುತ್ತಮುತ್ತಲಿನವರಿಗೆ ಅರಿವನ್ನು ಮೂಡಿಸುವ ಮಹತ್ಕಾರ್ಯ ಮಾಡಬೇಕಾಗಿದೆ ಎಂದು ಮಂಗಳೂರಿನ ಹಿರಿಯ ಸಿವಿಲ್ ನ್ಯಾಯಾಧೀಶ ದ.ಕ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯೆ ಕಾರ್ಯದರ್ಶಿ ಶೋಭಾ ಬಿಜಿ ನುಡಿದರು.
ಸುರತ್ಕಲ್ ನ ಗೋವಿಂದದಾಸ ಪದವಿಪೂರ್ವ ಕಾಲೇಜಿನಲ್ಲಿ ಕರ್ನಾಟಕ ರಾಜ್ಯಮಾಲಿನ್ಯ ನಿಯಂತ್ರಣ ಮಂಡಳಿ, ಪ್ರಾದೇಶಿಕ ಕಚೇರಿ ಜಿಲ್ಲಾಡಳಿತ ದ.ಕ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಅರಣ್ಯ ಇಲಾಖೆ, ಶಿಕ್ಷಣ ಇಲಾಖೆ, ಗೋವಿಂದದಾಸ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ವಿಶ್ವಪರಿಸರ ದಿನಾಚರಣೆ 2022ನ್ನು ಉದ್ಘಾಟಿಸಿ ಮಾತಾಡಿದರು. ಅಭಿವೃದ್ಧಿ ಹಾಗೂ ವಿನಾಶ ಒಟ್ಟಿಗೆ ಸಾಗಬಾರದು. ಕಂಪೆನಿಗಳು, ಸಾರ್ವಜನಿಕರು ಇರುವ ಒಂದೇ ಭೂಮಿಯನ್ನು ಉಳಿಸಲು ಸರಕಾರ ಮಾಡಿದ ಸಂರಕ್ಷಣಾ ಕಾನೂನು ಪಾಲಿಸಿದಾಗ ಯಾವುದೇ ಸಮಸ್ಯೆ ಆಗಲಾರದು. ನಮ್ಮ ಜವಾಬ್ದಾರಿಯನ್ನು ಅರಿತು ನಡೆದುಕೊಂಡಾಗ ಪರಿಸರ ಸಹಬಾಳ್ವೆಯನ್ನು ಮುಂದಿನ ಜನಾಂಗಕ್ಕೂ ನೀಡಿದಂತಾಗುತ್ತದೆ ಎಂದರು.
ನಿಟ್ಟೆ ಎಜುಕೇಶನ್ ಟ್ರಸ್ಟ್ ನಿರ್ದೇಶಕ ಪ್ರೊ.ಜಿ.ಶ್ರೀನಿಕೇತನ್ ಮಾತನಾಡಿ, ಹವಮಾನ ವೈಪರಿತ್ಯದ ಬಗ್ಗೆ ನಾವೆಲ್ಲಾ ಜಾಗೃತರಾಗಬೇಕಾಗಿದೆ. ಅತಿಯಾದ ಉಷ್ಣಾಂಶದಿಂದ ಹಲವು ಕಾಯಿಲೆಗಳು ವ್ಯಾಪಿಸಿದ್ದು ನಮಗೆ ಮುನ್ನೆಚ್ಚರಿಕೆ ನೀಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಸಿ ಆರ್ ಝಡ್ ಅಧಿಕಾರಿ ಮಹೇಶ್ ಕುಮಾರ್, ಗೋವಿಂದದಾಸ ಕಾಲೇಜಿನ ಪ್ರಾಂಶುಪಾಲ ಪ್ರೊ. ಕೃಷ್ಣಮೂರ್ತಿ, ಜಿಲ್ಲೆಯ ಪರಿಸರ ಅಧಿಕಾರಿ ಕೆ.ಕೀರ್ತಿಕುಮಾರ್, ಹಿರಿಯ ನಿವೃತ್ತ ವೈಜ್ಞಾನಿಕ ಅಧಿಕಾರಿ ಜಯಪ್ರಕಾಶ್ ಎಸ್ ನಾಯಕ್, ಹಿಂದೂ ವಿದ್ಯಾದಾಯಿನಿ ಸಂಘದ ಕಾರ್ಯದರ್ಶಿ ಎಚ್ ಶ್ರೀರಂಗ, ಸಂಘದ ಉಪಾಧ್ಯಕ್ಷ ವೈ ವಿ ರತ್ನಾಕರ್ ರಾವ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಲಕ್ಷ್ಮೀ ಪಿ ಮತ್ತಿತರು ಉಪಸ್ಥಿತರಿದ್ದರು.
Kshetra Samachara
11/06/2022 07:44 am