ಸುಳ್ಯ: ಉತ್ತಮ ವಿದ್ಯೆ ಪಡೆದು ಪರಂಪರೆಯಿಂದ ಬಂದ ಸಂಸ್ಕಾರವನ್ನು ಪೋಷಿಸಿ ಮುಂದಿನ ತಲೆಮಾರಿಗೆ ಹಸ್ತಾಂತರಿಸುವ ಕೆಲಸ ಆಗಬೇಕು ಎಂದು ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ. ಸುಳ್ಯ ಹಳೆಗೇಟು ವಿದ್ಯಾನಗರದ ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ವತಿಯಿಂದ ನಡೆದ ಶ್ರೀಕೇಶವ ಕೃಪಾ ವೇದ ಯೋಗ ಕಲಾ ಶಿಬಿರದ ಸಮಾಪನ ಮತ್ತು ಸಾಧಕರಿಗೆ ಶ್ರೀ ಕೇಶವಸ್ಕೃತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
ವಿದ್ಯೆ ಮತ್ತು ಜ್ಞಾನ ಮುಂದಿನ ತಲೆಮಾರಿಗೆ ಹಸ್ತಾಂತರವಾಗುವುದರ ಜೊತೆಗೆ ನಮ್ಮ ಬದುಕು ಹೊಸ ತಲೆಮಾರಿಗೆ ದಾರಿ ದೀಪವಾಗಬೇಕು ಆ ಮೂಲಕ ಸುಸಂಸ್ಕೃತ ಸಮಾಜವನ್ನು ರೂಪಿಸಬೇಕು ಎಂದು ಅವರು ಹೇಳಿದರು.ಯಾವ ಧರ್ಮ ನಮ್ಮಿಂದ ರಕ್ಷಿಸಲ್ಪಡುತ್ತದೆಯೋ ಆ ಧರ್ಮ ನಮ್ಮನ್ನು ರಕ್ಷಿಸುತ್ತದೆ ಎಂದ ಸುಬ್ರಹ್ಮಣ್ಯ ಶ್ರೀಗಳು ಧರ್ಮಪಾಲನೆ ಮಾಡಿ ಬದುಕಿದರೆ ಧರ್ಮವು ನಮಗೆ ಶ್ರೀರಕ್ಷೆಯಾಗುತ್ತದೆ. ಧರ್ಮವನ್ನೂ ಸಂಸ್ಕಾರವನ್ನೂ ಪಾಲಿಸಿ ಅದನ್ನು ಮುಂದಿನ ತಲೆಮಾರಿಗೆ ದಾಟಿಸುವ ಸೇತುವಾಗಬೇಕು ಎಂದು ಅವರು ಹೇಳಿದರು. ಸಾತ್ವಿಕ ಮಕ್ಕಳನ್ನು ರೂಪಿಸುವ ಕೇಶವ ಕೃಪಾ ವೇದ ಶಿಬಿರವು ಸುಂದರ ಪಾಠಶಾಲೆ ಎಂದು ಅವರು ಬಣ್ಣಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪುತ್ತೂರಿನ ಸ್ವರ್ಣೋದ್ಯಮಿ ಹಾಗು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಮಾತನಾಡಿ’ ವೇದ ಮತ್ತು ಸಂಸ್ಕಾರವನ್ನು ಕಲಿಸುವ ಮೂಲಕ ಧಾರ್ಮಿಕತೆಯನ್ನು ಅಕ್ಷಯವಾಗಿಸುವ
ಯಜ್ಞೇಶ್ ಆಚಾರ್ ಅವರಿಗೆ ಪ್ರಶಸ್ತಿ ಪ್ರದಾನ ವೇದ ಶಿಬಿರದ ಮೂಲಕ ಶ್ರೇಷ್ಠವಾದ ಕಾರ್ಯ ನಡೆಯುತಿದೆ ಎಂದು ಹೇಳಿದರು. ವಿದ್ಯೆ ಮತ್ತು ಜ್ಞಾನವನ್ನು ಧಾರೆಯೆರೆದು ಸುಸಂಸ್ಕೃತ ಯುವ ಸಮಾಜವನ್ನು ರೂಪಿಸುವಲ್ಲಿ ಇದು ಮಹತ್ವದ ಪಾತ್ರ ವಹಿಸುತಿದೆ ಎಂದು ಅಭಿಪ್ರಾಯಪಟ್ಟರು.
ಕೇಶವ ಸ್ಮೃತಿ ಪ್ರಶಸ್ತಿ ಪ್ರದಾನ:
ಪ್ರತಿಷ್ಠಾನದ ವತಿಯಿಂದ ವೇದ , ಯೋಗ ಮತ್ತು ಕಲಾ ಕ್ಷೇತ್ರದ ಸಾಧಕರಿಗೆ ಶ್ರೀ ಕೇಶವ ಸ್ಮೃತಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಜ್ಯೋತಿಷ್ಯ ಕ್ಷೇತ್ರದಿಂದ ಬ್ರಹ್ಮಶ್ರೀ ಶ್ರೀಧರ ಗೋರೆ ,ಕಲಾ ಕ್ಷೇತ್ರದಿಂದ ಸಂಗೀತ ವಿದ್ಯಾಂಸ ಯಜ್ಞೇಶ್ ಆಚಾರ್ ಸುಬ್ರಹ್ಮಣ್ಯ ಇವರಿಗೆ ಶ್ರೀಕೇಶವ ಸ್ಮೃತಿ ಪ್ರಶಸ್ತಿಯನ್ನು ಸುಬ್ರಹ್ಮಣ್ಯ ಶ್ರೀಗಳು ಪ್ರದಾನ ಮಾಡಿದರು. ಸಂಸ್ಕೃತ ಉಪನ್ಯಾಸಕ ಪಿ.ವಿ.ಶ್ರೀಹರಿ ಶರ್ಮಾ ಪಾದೆಕಲ್ಲು ಅಭಿನಂದನಾ ಭಾಷಣ ಮಾಡಿದರು.ಪ್ರತಿಷ್ಠಾನದ ಗೌರವಾಧ್ಯಕ್ಷ ಶ್ರೀ ಗೋಪಾಲಕೃಷ್ಣ ಭಟ್ ವಗೆನಾಡು, ಶಂಕರ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ರೀಧರ ಗೋರೆ ಅವರಿಗೆ ಪ್ರಶಸ್ತಿ ಪ್ರದಾನ
ಶಿಬಿರದ ವಿದ್ಯಾರ್ಥಿಗಳಾದ ಅಭಿರಾಮ್ ಭಟ್, ಆತ್ರೇಯ ರಾಮ ಶರ್ಮ, ಅನ್ವೇಷ ಕೃಷ್ಣ ಪಟ್ಟಾಜೆ ಅವರಿಗೆ ಸರ್ವ ಪ್ರಥಮ ಪ್ರಶಸ್ತಿ ಮತ್ತು ವಿಭು ಭಟ್ ಪಾದೆಕಲ್ಲು, ಸಾತ್ವಿಕ್ ಕೃಷ್ಣ ನಾರಾವಿ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಶ್ರೀ ಕೇಶವ ವೇದ ಮತ್ತು ಕಲಾ ಪ್ರತಿಷ್ಠಾನದ ಅಧ್ಯಕ್ಷ ಪುರೋಹಿತ ನಾಗರಾಜ ಭಟ್ ಸ್ವಾಗತಿಸಿದರು. ಶಿಬಿರದ ಸಂಚಾಲಕ ಅಭಿರಾಮ್ ಭಟ್ ವಂದಿಸಿದರು. ಶ್ರೀದೇವಿ ನಾಗರಾಜ ಭಟ್ ಕಾರ್ಯಕ್ರಮ ನಿರೂಪಿಸಿದರು.
21 ದಿನಗಳ ಶಿಬಿರ ಸಂಪನ್ನ:
ವೇದ ಯೋಗ ಮತ್ತು ಕಲೆಗಳ ಉಳಿವಿಗಾಗಿ ತನ್ನದೇ ಕೊಡುಗೆಯನ್ನು ನೀಡುತ್ತಿರುವ ಸುಳ್ಯದ ಶ್ರೀಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನವು ಪ್ರತಿ ವರ್ಷ ಬೇಸಿಗೆ ರಜೆಯಲ್ಲಿ ವೇದ ಯೋಗ ಕಲಾ ಶಿಬಿರವನ್ನು ಆಯೋಜಿಸುತ್ತಿದ್ದು ಈ ವರ್ಷದ ಶಿಬಿರ 21 ದಿನಗಳ ಕಾಲ ನಡೆಯಿತು. ಏಪ್ರಿಲ್ 12 ರಿಂದ ಆರಂಭಗೊಂಡ ಶಿಬಿರ ಮೇ 3 ರಂದು ಸಮಾಪನಗೊಂಡಿತು. ರಾಜ್ಯ ಮತ್ತು ಹೊರರಾಜ್ಯದ 120 ಶಿಬಿರಾರ್ಥಿಗಳು ಭಾಗವಹಿಸಿದ್ದರು. ಅಶನ, ವಸನ,ವಸ್ತ್ರ,ಪುಸ್ತಕಗಳು , ವ್ಯಾಸಪೀಠವೂ ಸೇರಿದಂತೆ ಸಂಪೂರ್ಣ ಉಚಿತ ಶಿಬಿರದಲ್ಲಿ ವೇದಾಧ್ಯಯನ , ಯೋಗಾಭ್ಯಾಸ,ಕ್ರೀಡೆ,ಈಜು ತರಬೇತಿ,ಅಗ್ನಿಶಾಮಕ ಪ್ರಾತ್ಯಕ್ಷಿಕೆ , ಜಾದೂ , ಮಿಮಿಕ್ರಿ , ಭಜನೆ ಇನ್ನಿತರ ಬೌದ್ಧಿಕ – ಭೌತಿಕ ವಿಕಾಸ ಪ್ರಕ್ರಿಯೆಗೆ ಸಂಬಂಧಿಸಿದ ಕಲಿಕೆಯ ಜೊತೆ ಮನೋ ರಾಜನ ಚಟುವಟಿಕೆಗಳು ಶಿಬಿರದಲ್ಲಿ ನಡೆದಿತ್ತು.
Kshetra Samachara
03/05/2022 07:40 pm