ಸುಳ್ಯ: ಕೃಷಿ ಪರಂಪರೆಯನ್ನು ಮುಂದುವರಿಸಿಕೊಂಡು ಆಧ್ಯಾತ್ಮಿಕ ಬದುಕನ್ನು ರೂಪಿಸಿದ ಸಜ್ಜನ ಸಮುದಾಯ ಗೌಡ ಸಮಾಜ. ದೇಶಕ್ಕೆ ನಾಯಕತ್ವವನ್ನು ಕೊಡಬಲ್ಲ ಶಕ್ತಿಯನ್ನು ಗೌಡ ಸಮಾಜ ಹೊಂದಿದೆ ಎಂದು ಪುತ್ತೂರು ಶಾಸಕರಾದ ಸಂಜೀವ ಮಠಂದೂರು ಅಭಿಪ್ರಾಯಪಟ್ಟಿದ್ದಾರೆ. ಸುಳ್ಯ ತಾಲೂಕು ಗೌಡರ ಯುವ ಸೇವಾ ಸಂಘ, ಮಹಿಳಾ ಘಟಕ ಮತ್ತು ತರುಣ ಘಟಕ ಮತ್ತು ಗ್ರಾಮ ಸಮಿತಿಗಳ ಆಶ್ರಯದಲ್ಲಿ ಸುಳ್ಯ ಕೊಡಿಯಾಲಬೈಲು ಗೌಡ ಸಮುದಾಯ ಭವನದಲ್ಲಿ ಎ.30 ರಂದು ನಡೆದ ವಾರ್ಷಿಕ ಸಮಾವೇಶ 2022 ಮತ್ತು ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾಗಿ ಆಯ್ಕೆಯಾದ ಡಾ.ರೇಣುಕಾ ಪ್ರಸಾದ್ ಕೆ.ವಿ.ಅವರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತ ಆಧ್ಯಾತ್ಮಿಕ ದೇಶವಾಗಿ ಜಗತ್ತಿಗೆ ಮಾರ್ಗದರ್ಶನ ಮಾಡಿದೆ. ಕೃಷಿ ಮತ್ತು ಋಷಿ ಪರಂಪರೆ ನಮ್ಮದು. ಸನಾತನ ಸಂಪ್ರದಾಯವನ್ನು ಚಾಚೂ ತಪ್ಪದೆ ಪಾಲಿಸಿಕೊಂಡು ಬರುವ ಗೌಡ ಸಮುದಾಯವು ತನ್ನ ಸಂಸ್ಕೃತಿ ಪರಂಪರೆಯನ್ನು ಪಾಲಿಸಿಕೊಂಡು ಅದನ್ನು ಉಳಿಸಿ ಬೆಳೆಸಿ ಮುಂದಿನ ತಲೆಮಾರಿಗೆ ಹಸ್ತಾಂತರ ಮಾಡುತಿದೆ ಎಂದರು. ಒಕ್ಕಲಿಗ ಗೌಡ ಸಮುದಾಯಕ್ಕೆ ಸರಕಾರ ಹೆಚ್ಚಿನ ಆದ್ಯತೆ ನೀಡುತ್ತಿದ್ದು ಈ ಸಮುದಾಯದ ಶ್ರೇಯಾಭಿವೃದ್ಧಿಗೆ ಹಲವು ಯೋಜನೆಗಳನ್ನು ರೂಪಿಸಿದೆ ಎಂದರು.
ಸುಳ್ಯದಲ್ಲಿ ವಿದ್ಯಾರ್ಥಿ ನಿಲಯ-ಸಿ.ಎನ್.ಬಾಲಕೃಷ್ಣ:
ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ.ರೇಣುಕಾ ಪ್ರಸಾದ್ ಕೆ.ವಿ.ಅವರನ್ನು ಸನ್ಮಾನಿಸಿದ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ, ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ ಎಲ್ಲರನ್ನೂ ಸಮಾನರಾಗಿ ಕಾಣುವ ಗೌಡ ಸಮುದಾಯ ಸಾಮಾಜಿಕ ನ್ಯಾಯದ ಅಡಿಯಲ್ಲಿ ಬದುಕು ನಡೆಸುತಿದೆ ಎಂದರು. ಒಕ್ಕಲಿಗರ ಸಂಘದ ವತಿಯಿಂದ ಸುಳ್ಯದಳಲ್ಲಿ ವಿದ್ಯಾರ್ಥಿ ನಿಲಯ ಸ್ಥಾಪನೆ ಮಾಡಲಾಗುವುದು ಎಂದು ಘೋಷಿಸಿದರು. ಒಕ್ಕಲಿಗರ ಅಭಿವೃದ್ಧಿ ನಿಗಮಕ್ಕೆ 500 ಕೋಟಿ ನೀಡುವುದಾಗಿ ಸರಕಾರ ಘೋಷಣೆ ಮಾಡಿದೆ. ಆದರೆ ಈಗ 100 ಕೋಟಿ ರೂ ಮಾತ್ರ ಬಂದಿದೆ. ಉಳಿದ ಮೊತ್ತ ಬರಲು ಸರಕಾರವನ್ನು ಒತ್ತಾಯಿಸಲಾಗುವುದು ಎಂದು ಅವರು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ರೇಣುಕಾಪ್ರಸಾದ್ ‘ಒಕ್ಕಲಿಗರಿಗೆ ಗೌರವ ಬರುವ ನೆಲೆಯಲ್ಲಿ ಕೆಲಸ ಮಾಡುತ್ತೇನೆ ಎಂದರು. ಒಕ್ಕಲಿಗರ ಸಂಘದ ವತಿಯಿಂದ ಸುಳ್ಯದಲ್ಲಿ ಉಚಿತ ವಿದ್ಯಾರ್ಥಿ ನಿಲಯ ಸ್ಥಾಪನೆಗೆ ಸಿದ್ಧತೆ ನಡೆದಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ವಿಧಾನ ಪರಿಷತ್ ಸದಸ್ಯ ಎಲ್.ಭೋಜೇ ಗೌಡ, ರಾಜ್ಯ ಒಕ್ಕಲಿಗರ ಸಂಘದ ಗೌರವಾಧ್ಯಕ್ಷ ಡಾ.ಆಂಜನಪ್ಪ ಮಾತನಾಡಿದರು. ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಚಂದ್ರ ಕೋಲ್ಚಾರು ಅಧ್ಯಕ್ಷತೆ ವಹಿಸಿದ್ದರು. ಮಹಾತ್ಮಾ ಗಾಂಧಿ ಮಲ್ನಾಡು ಪ್ರೌಢ ಶಾಲೆಯ ಮುಖ್ಯ ಗುರುಗಳಾಗಿದ್ದ ಕೆ.ಚಿದಾನಂದ ಅವರನ್ನು ಗೌರವಿಸಲಾಯಿತು. ಸಿ.ಎನ್.ಬಾಲಕೃಷ್ಣ ಅವರನ್ನು ಸನ್ಮಾನಿಸಲಾಯಿತು.
ರಾಜ್ಯ ಒಕ್ಕಲಿಗರ ಸಂಘದ ಜೊತೆ ಕಾರ್ಯದರ್ಶಿ ರಾಘವೇಂದ್ರ, ನಿರ್ದೇಶಕ ಮಂಜೇಗೌಡ ಅತಿಥಿಗಳಾಗಿದ್ದರು. ವೆಂಕಟ್ರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಪಿ.ಸಿ.ಜಯರಾಮ, ಎ.ವಿ.ತೀರ್ಥರಾಮ,ದೊಡ್ಡಣ್ಣ ಬರೆಮೇಲು,ಗೌಡರ ಯುವ ಸೇವಾ ಸಂಘದ ಉಪಾಧ್ಯಕ್ಷರಾದ ದಾಮೋದರ ನಾರ್ಕೋಡು,ಸದಾನಂದ ಮಾವಜಿ,ಕೂಸಪ್ಪ ಗೌಡ ಮುಗುಪ್ಪು, ಪ್ರಧಾನ ಕಾರ್ಯದರ್ಶಿ ಬೆಳ್ಯಪ್ಪ ಗೌಡ ಬಳ್ಳಡ್ಕ, ಕೋಶಾಧಿಕಾರಿ ಚಂದ್ರಶೇಖರ ಮೇರ್ಕಜೆ, ಕಾರ್ಯದರ್ಶಿಗಳಾದ ಡಾ.ಪುರುಷೋತ್ತಮ ಕೆ.ಜಿ, ದಿನೇಶ್ ಮಡ್ತಿಲ, ವೀರಪ್ಪ ಗೌಡ ಕಣ್ಕಲ್, ಕೆ.ಎಂ.ಬಿ.ಉಮೇಶ್, ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾವತಿ ಮಾಣಿಬೆಟ್ಟು, ತರುಣ ಘಟಕದ ಅಧ್ಯಕ್ಷ ರಜತ್ ಗೌಡ ಅಡ್ಕಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜಕ ಪಿ.ಎಸ್.ಗಂಗಾಧರ ಸ್ವಾಗತಿಸಿ, ದಿನೇಶ್ ಮಡಪ್ಪಾಡಿ ಪ್ರಸ್ತಾವಿಕವಾಗಿ ಮಾತನಾಡಿದರು. ಪೂರ್ಣಿಮಾ ಮಡಪ್ಪಾಡಿ ಪ್ರಾರ್ಥಿಸಿದರು. ಕೆ.ಟಿ.ವಿಶ್ವನಾಥ್ ಕಾರ್ಯಕ್ರಮ ನಿರೂಪಿಸಿದರು. ಸಮಾವೇಶಕ್ಕೆ ಮುನ್ನ ಶ್ರೀ ಲಕ್ಷ್ಮೀ ಸಹಿತ ಶ್ರೀ ಸತ್ಯನಾರಾಯಣ ದೇವರ ಪೂಜೆ ನಡೆಯಿತು
Kshetra Samachara
30/04/2022 10:33 pm