ಮುಲ್ಕಿ : ಇಪ್ಪತ್ತೊಂದು ಕಾದಂಬರಿ, ಹದಿಮೂರು ಕವನ ಸಂಗ್ರಹ, ಆರು ಕಥಾ ಸಂಗ್ರಹ ಸೇರಿದಂತೆ ಸುಮಾರು ಹತ್ತು ಸಾವಿರ ಪುಟಗಳ ತನ್ನ ಎಲ್ಲ ಕೃತಿಗಳೂ ಡಿಜಿಟಲೈಜ್ ಆಗಿದ್ದು, 19ನೇ ವಯಸ್ಸಿನಲ್ಲಿ ಬರೆದ 1967ರಲ್ಲಿ ಪ್ರಕಟಗೊಂಡ ಮೊದಲ ಕೃತಿ ಪುರೂರವ ಗೀತಾ ನಾಟಕ ಮತ್ತೊಮ್ಮೆ ಪ್ರಕಟನೆ ಕಂಡಂತಾಗಿದೆ ಎಂದು ಖ್ಯಾತ ಸಾಹಿತಿ ನಾ. ಮೊಗಸಾಲೆ ಹೇಳಿದರು.
ಅವರು ಕಿನ್ನಿಗೋಳಿಯ ಅನಂತ ಪ್ರಕಾಶ ಪುಸ್ತಕ ಮನೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮುಲ್ಕಿ ಘಟಕ ಆಯೋಜಿಸಿದ ಕಾರ‍್ಯಕ್ರಮದಲ್ಲಿ ಗಾಯತ್ರೀ ಪ್ರಕಾಶನ ಪ್ರಕಟಿಸಿದ ಗೀತಾನಾಟಕ ಪುರೂರವದ ದ್ವಿತೀಯ ಮುದ್ರಣದ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.
ಹಿಂದೆ ಕಾವ್ಯವನ್ನು ಗಟ್ಟಿಯಾಗಿ ಓದಿಕೊಳ್ಳುತ್ತಿದ್ದರು. ಈಗ ಮೌನವಾಗಿ ಓದಿಕೊಳ್ಳುವ ಕ್ರಮ ಬಂದಿದೆ. ನನ್ನ ಆರಂಭದ ಕಾಲದಲ್ಲಿ ಬರೆದ ಗೀತಾನಾಟಕವನ್ನು ಯುಗಪುರುಷದ ಕೊ. ಅ.ಉಡುಪರು ಪ್ರಕಟಿಸಿ ಪ್ರೋತ್ಸಾಹಿಸಿದ್ದರು. ವೀರಭೂಮಿ ಪತ್ರಿಕೆಯಲ್ಲಿ ತನ್ನ ಬರಹ ಪ್ರಕಟಿಸಬೇಕೆಂದು ತುಂಬ ಆಸೆ ಪಟ್ಟರೂ ಸಾಧ್ಯವಾಗಿರಲಿಲ್ಲ. ಆದರೆ ನನ್ನ ಈ ಕೃತಿಗೆ ವೀರಭೂಮಿಯ ಸಂಪಾದಕ ಖ್ಯಾತ ಕವಿ ಎಸ್. ವೆಂಕಟರಾಜರೇ ಮುನ್ನುಡಿ ಬರೆದಿದ್ದರು. ಎಂದು ತನ್ನ ಮೊದಲ ಕೃತಿ ಪ್ರಕಟನೆಯ ಮೊದಲ ದಿನಗಳನ್ನು ನೆನಪಿಸಿಕೊಂಡ ನಾ. ಮೊಗಸಾಲೆ, ನಾನು ಜಾತ್ಯತೀತವಾಗಿ ಬದುಕಿದ್ದೇನೆ. 325 ಪುಸ್ತಕಗಳು ನಾಡಿಗೆ ನಮಸ್ಕಾರ ಹೆಸರಿನಲ್ಲಿ ಬಂದಿವೆ ಎಂದರು.
ಕಾಂತಾವರ ಕನ್ನಡ ಸಂಘವನ್ನು ಎತ್ತಿಹಿಡಿದ ಹರಿಕೃಷ್ಣ ಪುನರೂರರಿಗೆ ಡಾಕ್ಟರೇಟ್ ಬಂದುದು ನಿಜಕ್ಕೂ ಸಂತಸ ಎಂದು ಮೊಗಸಾಲೆ ಹೇಳಿದರು. ಹರಿಕೃಷ್ಣ ಪುನರೂರು ಕೃತಿ ಬಿಡುಗಡೆ ಮಾಡಿದರು. ಕೃತಿಕಾರ ನಾ. ಮೊಗಸಾಲೆ ದಂಪತಿಗಳನ್ನು ಅಭಿನಂದಿಸಲಾಯಿತು.
ಮಂಗಳೂರು ವಿವಿಯಿಂದ ಗೌರವ ಡಾಕ್ಟರೇಟ್ ಪಡೆಯಲಿರುವ ಹರಿಕೃಷ್ಣ ಪುನರೂರು ಅವರನ್ನು ಗೌರವಿಸಲಾಯಿತು. ಸಾಹಿತಿ ಸದಾನಂದ ನಾರಾವಿ ನಾ. ಮೊಗಸಾಲೆಯವರ ಬಗ್ಗೆ, ಮೋಹನದಾಸ ಸುರತ್ಕಲ್ ಹರಿಕೃಷ್ಣ ಪುನರೂರು ಬಗ್ಗೆ ಅಭಿನಂದನಾ ಮಾತುಗಳನ್ನಾಡಿದರು. ಆಶ್ವೀಜ ಉಡುಪ ಮೊಗಸಾಲೆಯವರ ಕವನಗಳನ್ನು ಹಾಡಿದರು. ಅನಂತಪ್ರಕಾಶದ ಸಚ್ಚಿದಾನಂದ ಉಡುಪ ಉಪಸ್ಥಿತರಿದ್ದರು.
ಮೂಲ್ಕಿ ಕಸಾಪ ಘಟಕದ ಗಾಯತ್ರೀ ಉಡುಪ ಸ್ವಾಗತಿಸಿದರು. ಧನಲಕ್ಷ್ಮೀ ಶೆಟ್ಟಿಗಾರ್ ಸಂಮಾನ ಪತ್ರ ವಾಚಿಸಿದರು. ಕಾರ‍್ಯದರ್ಶಿ ಜೊಸ್ಸಿಪಿಂಟೋ ನಿರೂಪಿಸಿದರು.
Kshetra Samachara
22/04/2022 09:50 pm