ಮಂಗಳೂರು: ನಗರದ ಪಾರಂಪರಿಕ ಕಟ್ಟಡವಾದ ಹಂಪನಕಟ್ಟೆಯ ಮಂಗಳೂರು ವಿವಿ ಕಾಲೇಜಿನ ಕಾಂಪೌಂಡ್ ಕೂಡ ಈಗ ಪರಂಪರೆಯನ್ನು ತಿಳಿಸುವ ಚಿತ್ರಗಳೊಂದಿಗೆ ಕಂಗೊಳಿಸುತ್ತಿದೆ.
ಸ್ವಚ್ಛ ಮಂಗಳೂರು ಫೌಂಡೇಶನ್ ವತಿಯಿಂದ ಆದಿತತ್ವ ಆರ್ಟ್ಸ್ ನ ಸುಮಾರು 30 ಮಂದಿ ಕಲಾವಿದರ ತಂಡ ಈ ಚಿತ್ರಗಳನ್ನು ರಚನೆ ಮಾಡುತ್ತಿದೆ. ಕಳೆದ ಅನೇಕ ದಿನಗಳಿಂದ ಇವರ ಕುಂಚ ಕಲೆಯು ವೈವಿಧ್ಯಮಯವಾಗಿ ತಡೆಗೋಡೆ ಮೇಲೆ ಅರಳುತ್ತಿದೆ.
ವಿವಿ ಕಾಲೇಜು ಮಾತ್ರವಲ್ಲದೆ ಪಕ್ಕದ ವೆನ್ಲಾಕ್ ಆಸ್ಪತ್ರೆ ಕಂಪೌಂಡ್ ಮೇಲೂ ಕೂಡ ಚಿತ್ರ ರಚನೆಯ ಉದ್ದೇಶವನ್ನು ಈ ಕಲಾವಿದರು ಹೊಂದಿದ್ದಾರೆ. 30 ಮಂದಿ ಕಲಾವಿದರು 30 ದಿನಗಳಲ್ಲಿ ಈ ಕೆಲಸವನ್ನು ಮುಗಿಸಲಿದ್ದಾರೆ.
ಕರಾವಳಿಯ ಭೂತಾರಾಧನೆ, ಪಾಡ್ದನ, ಕಂಬಳ ಇತ್ಯಾದಿ ಸಂಸ್ಕೃತಿಯನ್ನು ಬಿಂಬಿಸುವ ಕಲಾಕೃತಿಗಳು, ಕರಾವಳಿಯ ಕ್ರೀಡೆಗಳಾದ ಚಿನ್ನಿದಾಂಡು, ಲಗೋರಿ ಕುಟ್ಟಿ ದೊಣ್ಣೆ ಸೇರಿದಂತೆ ವಿವಿಧ ಆಯಾಮಗಳಲ್ಲಿ ಕರಾವಳಿಯ ಪರಂಪರೆ, ಸಂಸ್ಕೃತಿ, ಜನಜೀವನವನ್ನು ತಿಳಿಸುವ ಕಾರ್ಯ ಈ ಚಿತ್ರಗಳ ಮೂಲಕ ನಡೆಯಲಿದೆ ಎಂದು ಕಲಾವಿದರು ತಿಳಿಸಿದ್ದಾರೆ.
ಪ್ರಸ್ತುತ ಈ ಕಲಾವಿದರ ಕೈಚಳಕವನ್ನು ಸಾರ್ವಜನಿಕರೂ ಕುತೂಹಲದಿಂದ ನೋಡುತ್ತಿದ್ದಾರೆ.
Kshetra Samachara
09/04/2022 04:00 pm