ಮುಲ್ಕಿ: ತಂದೆಯೇ ಧರ್ಮ, ತಂದೆಯೇ ಸ್ವರ್ಗ, ತಂದೆಯೇ ಸವೋಚ್ಛ ತ್ಯಾಗ, ವಿಶ್ವದ ಶ್ರೇಷ್ಠ ಪೀಠಗಳಿಗಿಂತಲೂ ಶ್ರೇಷ್ಠ ಪೀಠ ಎಂದರೆ ಪಿತೃ ಪೀಠ. ಅದರಲ್ಲೂ ಸಾಧನಾಶೀಲ ಪಿತಾ ಸಿಗುವುದು ಎಂದರೆ ಪುಣ್ಯ. ಅಂತಹ ಪುಣ್ಯವಂತರು ನಾವು ಎಂದು ಅಂತಾರಾಷ್ಟಿಯ ವಾಸ್ತುತಜ್ಞ, ಆಧ್ಯಾತ್ಮಿಕ ಗುರು, ವೈಜ್ಞಾನಿಕ ಜ್ಯೋತಿಷಿ ಶ್ರೀಶ್ರೀ ಚಂದ್ರಶೇಖರ ಸ್ವಾಮೀಜಿ ಹೇಳಿದರು.
ಮುಲ್ಕಿಯ ಕಿಲ್ಪಾಡಿಯಲ್ಲಿ ಶ್ರೀಶ್ರೀ ಚಂದ್ರಶೇಖರ ಆಶ್ರಮದಲ್ಲಿ ನಡೆದ ಜ್ಯೋತಿಷ್ಯರತ್ನ ಕಿಲ್ಪಾಡಿ ಗೋವಿಂದ ಭಟ್ ಅವರ 7ನೇ ವರ್ಷದ ಪುಣ್ಯ ಸ್ಮರಣ ವಿಶೇಷ ಉಪನ್ಯಾಸ ಹಾಗೂ ಬಡ ಬ್ರಾಹ್ಮಣ ಕುಟುಂಬಕ್ಕೆ ಆರ್ಥಿಕ ಸಹಾಯ ವಿತರಿಸಿ ಅವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ಬೆಂಗಳೂರಿನ 5 ಹಾಗೂ ಮೂಲ್ಕಿಯ 4 ಹೀಗೆ ಒಟ್ಟು 9 ಬಡ ಕುಟುಂಬಗಳಿಗೆ ಆರ್ಥಿಕ ಸಹಾಯ ಹಸ್ತ ನೀಡಲಾಯಿತು.
ಕಿಲ್ಪಾಡಿ ಗೋವಿಂದ್ ಭಟ್ ರವರು ಜ್ಯೋತಿಷ್ಯ ಶಾಸ್ತ್ರವನ್ನು ಸಂಪೂರ್ಣ ಮನನ ಮಾಡಿ, ಅವುಗಳನ್ನು ವೈಜ್ಞಾನಿಕವಾಗಿ ಅಧ್ಯಯನ ನಡೆಸಿದ್ದರು.
ಭಾರತೀಯ ಜ್ಯೋತಿಷ್ಯ ಶಾಸ್ತ್ರವನ್ನು ವಿಶ್ವಮಟ್ಟಕ್ಕೆ ಕೊಂಡೊಯ್ಯುವಲ್ಲಿ ಕಿಲ್ಪಾಡಿ ಗೋವಿಂದ ಭಟ್ ಅವರ ಪಾತ್ರ ಹಿರಿದಾಗಿದೆ ಎಂದರು.
ಕಿಲ್ಪಾಡಿ ಗೋವಿಂದ್ ಭಟ್ ಅವರ ಜೀವನವೇ ಒಂದು ಅಧ್ಯಯನ ಗ್ರಂಥ. ಅವರ ಸಲಹೆಗಾಗಿ ಬಂದವರ ಬಗ್ಗೆ ಸಮಗ್ರ ಚಿಂತನೆ ನಡೆಸಿ ನೀಡುತ್ತಿದ್ದ ಪರಿಹಾರ ಮತ್ತು ಪರಿಣಾಮದಿಂದಾಗಿಯೇ ಅವರು ಜನಜನಿತರಾಗಿದ್ದರು. ಇದರಿಂದಾಗಿ ನಾಡಿನ ಮೂಲೆ ಮೂಲೆಗಳಿಂದ ಜನರು ಚಿಂತನೆ ಮಾಡಲು ಬರುತ್ತಿದ್ದರು. ಇದರಿಂದಾಗಿ ಸಾವಿರಾರು ಕುಟುಂಬದಲ್ಲಿ, ಜೀವನದಲ್ಲಿ ನಂದಾದೀಪ ಮೂಡಿಸಿದ ಶ್ರೇಷ್ಠ ಸರಳ ವ್ಯಕ್ತಿತ್ವ ಅವರದ್ದು ಎಂದು ಬಣ್ಣಿಸಿದರು.
ಗೀತೆಯ ಸಾರದಂತೆ ಪ್ರಕೃತಿಯಿಂದ ಬಂದಿರುವ ಸಹಜ ಕರ್ಮಗಳಾದ ಶಮ, ದಮ, ತಪಸ್ಸು, ಶುಚಿತ್ವ, ಕ್ಷಮೆ, ಸರಳತೆ, ಜ್ಞಾನ, ವಿಜ್ಞಾನ, ಅಸ್ತಿಕ್ಯ, ಬುದ್ಧಿ ಹೀಗೆ ಹತ್ತು ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾರ್ಥಕ ಬದುಕು ಸಾಧಿಸಿದ ಜ್ಯೋತಿಷ್ಯ ರತ್ನ ಕಿಲ್ಪಾಡಿ ಗೋವಿಂದ ಭಟ್ ರವರ ಜೀವನ ಅನುಕರಣೀಯ. ಅವರು ಹಾಕಿಕೊಟ್ಟ ಹಾದಿಯಲ್ಲೇ ನಾವು ಮುಂದುವರಿಯುತ್ತಿದ್ದೇವೆ ಎಂದು ಸ್ವಾಮೀಜಿ ಹೇಳಿದರು.
ಈ ಸಂದರ್ಭದಲ್ಲಿ ಮಾತೃಶ್ರೀ ಶಾರದಮ್ಮ ಗೋವಿಂದ ಭಟ್, ವಿಶ್ವನಾಥ ಭಟ್, ಉಷಾಶ್ರೀ ಭಟ್, ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದ ನಿರ್ದೇಶಕಿ ರಜನಿ ಸಿ ಭಟ್, ರೋಶನಿ ಸಿ. ಭಟ್, ರಾಹುಲ್ ಸಿ. ಭಟ್ ಆಶ್ರಮದ ಸಂಚಾಲಕ ಪುನೀತ್ ಕೃಷ್ಣ, ರಾಜೇಶ್ ಭಟ್, ವೀಣಾ ಭಟ್ ಉಪಸ್ಥಿತರಿದ್ದರು.
ವಿಶೇಷ ಉಪನ್ಯಾಸದಲ್ಲಿ ಕಿಲ್ಪಾಡಿ ಗೊವಿಂದ ಭಟ್ ರವರ ಶಿಷ್ಯವೃಂದ ಅಭಿಮಾನಿಗಳು ಭಾಗವಹಿಸಿದ್ದರು.
Kshetra Samachara
09/03/2022 04:52 pm