ಉಡುಪಿ: ಉಡುಪಿ ಧರ್ಮಪ್ರಾಂತ್ಯದ ಮಹತ್ವಾಕಾಂಕ್ಷಿ ಯೋಜನೆಯಾದ ಪಾಲನಾ ಕೇಂದ್ರ ಅನುಗ್ರಹ ಇದರ ಉದ್ಘಾಟನೆ ಮತ್ತು ಆಶೀರ್ವಚನ ಸಮಾರಂಭ ಅಂಬಾಗಿಲು ಸಮೀಪದ ಕಕ್ಕುಂಜೆ ಬಳಿ ನೆರವೇರಿತು. ಎಜುಕೇರ್ ಸಂಸ್ಥೆಯ ಆಧ್ಯಾತ್ಮಿಕ ನಿರ್ದೇಶಕರು, ಉಡುಪಿ ಜಿಲ್ಲೆಯ ಹಿಂದಿನ ಎಪಿಸ್ಕೋಪಲ್ ವಿಕಾರ್ ಆಗಿರುವ ವಂ|ಡಾ| ವಲೇರಿಯನ್ ಡಿʼಸೋಜಾ ಅವರು ಪಾಲನಾ ಕೇಂದ್ರವನ್ನು ಉದ್ಘಾಟಿಸಿದರು. ಬೆಂಗಳೂರು ಮಹಾಧರ್ಮಾಧ್ಯಕ್ಷ ವಂ|ಡಾ|ಪೀಟರ್ ಮಚಾದೊ ಪಾಲನಾ ಕೇಂದ್ರದ ಆಶೀರ್ವಚವನ್ನು ನೆರವೇರಿಸಿದರು.
ಈ ವೇಳೆ ಉಪಸ್ಥಿತರಿದ್ದ ಉಡುಪಿ ಶಾಸಕ ರಘುಪತಿ ಭಟ್ ಮಾತನಾಡಿ, ಉಡುಪಿ ಧರ್ಮಪ್ರಾಂತ್ಯದ ಉಗಮವಾಗಿ ನೂತನ ಧರ್ಮಾಧ್ಯಕ್ಷರನ್ನು ಸ್ವಾಗತಿಸುವ ವೇಳೆ ಹಾಗೂ ಇಂದು ಹತ್ತು ವರ್ಷಗಳ ಬಳಿಕ ಮತ್ತೆ ಪಾಲನಾ ಕೇಂದ್ರದ ಉದ್ಘಾಟನೆಯ ಸಮಯದಲ್ಲಿ ಕ್ಷೇತ್ರದ ಶಾಸಕನಾಗಿ ಎರಡೂ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿರುವುದು ನನ್ನ ಭಾಗ್ಯವಾಗಿದೆ. ಕೆಥೊಲಿಕ್ ಸಮುದಾಯ ಉಡುಪಿ ಹಾಗೂ ಮಂಗಳೂರು ಜಿಲ್ಲೆಗಳಲ್ಲಿ ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಿರುವುದು ಶ್ಲಾಘನಾರ್ಹವಾದ ಸಂಗತಿಯಾಗಿದೆ. ಹತ್ತು ವರ್ಷಗಳ ಕನಸಿನ ಯೋಜನೆಯಾದ ಪಾಲನಾ ಕೇಂದ್ರದ ಮೂಲಕ ಉಡುಪಿ ಜಿಲ್ಲೆಯಲ್ಲಿ ಇನ್ನೂ ಹೆಚ್ಚಿನ ಸೇವೆ ಸಮುದಾಯದ ಮೂಲಕ ಲಭಿಸಲಿ ಎಂದು ಶುಭ ಹಾರೈಸಿದರು.
ಧರ್ಮಪ್ರಾಂತ್ಯದ ವತಿಯಿಂದ ಧರ್ಮಾಧ್ಯಕ್ಷ ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಅವರಿಗೆ ಧರ್ಮಪ್ರಾಂತ್ಯದ ಪಾಲನಾ ಸಮಿತಿಯ ಕಾರ್ಯದರ್ಶಿ ಲೆಸ್ಲಿ ಅರೋಜಾ ಮತ್ತು ಹಿಂದಿನ ಕಾರ್ಯದರ್ಶಿ ಅಲ್ಫೋನ್ಸ್ ಡಿʼಕೋಸ್ತಾ ಗೌರವಿಸಿದರು.
ಕಾರ್ಯಕ್ರಮದಲ್ಲಿ ಉದ್ಯಮಿ ಜೆರ್ರಿ ವಿನ್ಸೆಂಟ್ ಡಾಯಸ್, ಸ್ಥಳೀಯ ಕಕ್ಕುಂಜೆ ವಾರ್ಡಿನ ನಗರಸಭಾ ಸದಸ್ಯ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಕಲ್ಯಾಣಪುರ ಮಿಲಾಗ್ರಿಸ್ ಕೆಥೆಡ್ರಲ್ ರೆಕ್ಟರ್ ವಂ|ವಲೇರಿಯನ್ ಮೆಂಡೊನ್ಸಾ, ಸಂತೆಕಟ್ಟೆ ಮೌಂಟ್ ರೋಜರಿ ಚರ್ಚಿನ ಧರ್ಮಗುರು ವಂ|ಡಾ|ಲೆಸ್ಲಿಸ ಡಿʼಸೋಜಾ ಉಪಸ್ಥಿತರಿದ್ದರು.
ಧರ್ಮಪ್ರಾಂತ್ಯ ಎಸ್ಟೇಟ್ ಮ್ಯಾನೇಜರ್ ವಂ|ರೋಮಿಯೋ ಲೂವಿಸ್ ಅವರು ಪಾಲನಾ ಕೇಂದ್ರದ ರಚನೆಯ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಧರ್ಮಪ್ರಾಂತ್ಯದ ಕುಲಪತಿ ವಂ|ಸ್ಟ್ಯಾನಿ ಬಿ ಲೋಬೊ ಸ್ವಾಗತಿಸಿ, ಉಜ್ವಾಡ್ ಪತ್ರಿಕೆಯ ಸಂಪಾದಕರಾದ ವಂ|ರೋಯ್ಸನ್ ಫೆರ್ನಾಂಡಿಸ್ ವಂದಿಸಿದರು. ಧರ್ಮಪ್ರಾಂತ್ಯದ ಪಾಲನಾ ಸಮಿತಿಯ ಕಾರ್ಯದರ್ಶಿ ಲೆಸ್ಲಿ ಅರೋಜಾ ಕಾರ್ಯಕ್ರಮ ನಿರೂಪಿಸಿದರು.
Kshetra Samachara
13/01/2022 05:20 pm