ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ:ಅರ್ಚನಾ-ಸಮನ್ವಿ, ಸುನಾದಕೃಷ್ಣ ಅಮೈ ಅವರಿಗೆ ಡಾ.ಎಂ.ಎಸ್.ಸುಬ್ಬುಲಕ್ಷ್ಮೀ ಫೆಲೋಶಿಪ್

ಉಡುಪಿ : ಮುಂಬಯಿಯ ಶ್ರೀ ಷಣ್ಮುಖಾನಂದ ಫೈನ್ ಆರ್ಟ್ಸ್ ಆ್ಯಂಡ್ ಸಂಗೀತ ಸಭಾ(ರಿ.) ಕೊಡಮಾಡುವ ಪ್ರತಿಷ್ಠಿತ ಡಾ.ಎಂ.ಎಸ್.ಸುಬ್ಬುಲಕ್ಷ್ಮೀ ಫೆಲೋಶಿಪ್ ಗೆ ಉಡುಪಿಯ ಯುವ ಸಂಗೀತ ಪ್ರತಿಭೆಗಳಾದ ಅರ್ಚನಾ-ಸಮನ್ವಿ ಜೋಡಿ ಮತ್ತು ಮಂಗಳೂರಿನ ಯುವ ಮೃದಂಗಪಟು ಸುನಾದಕೃಷ್ಣ ಅಮೈ ಅವರು ಆಯ್ಕೆಯಾಗಿದ್ದಾರೆ.

ಶ್ರೀ ಷಣ್ಮುಖಾನಂದ ಚಂದ್ರಶೇಖರ ಸರಸ್ವತಿ ಸಭಾಂಗಣದಲ್ಲಿ ಡಿ.11ರಂದು ನಡೆದ ಭವ್ಯ ಸಮಾರಂಭದಲ್ಲಿ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರು ಅರ್ಚನಾ, ಸಮನ್ವಿ ಮತ್ತು ಸುನಾದಕೃಷ್ಣ ಸಹಿತ ದೇಶಾದ್ಯಂತದ 50 ಮಂದಿ ಪ್ರತಿಭಾವಂತ ಯುವ ಕಲಾವಿದರಿಗೆ ಫೆಲೋಶಿಪ್ ಪ್ರದಾನ ಮಾಡಿದರು. ಇವರಲ್ಲಿ 23 ಮಂದಿ ಪ್ರಸಕ್ತ ಸಾಲಿಗೆ ಹಾಗೂ 27 ಮಂದಿ ಕಳೆದ ಸಾಲಿಗೆ ಆಯ್ಕೆಯಾದವರು. ಕೊರೋನಾ ಕಾರಣದಿಂದ ಕಳೆದ ವರ್ಷ ಸಮಾರಂಭ ನಡೆದಿರಲಿಲ್ಲ. ಕರ್ನಾಟಕ ಮತ್ತು ಹಿಂದುಸ್ಥಾನಿ ಸಂಗೀತ ಕ್ಷೇತ್ರದಲ್ಲಿ ಯುವ ಪ್ರತಿಭಾನ್ವಿತರಿಗೆ ನೀಡಲಾಗುವ ಫೆಲೋಶಿಪ್ ವಾರ್ಷಿಕ 1 ಲಕ್ಷ ರೂ. ನಗದನ್ನು ಒಳಗೊಂಡಿದೆ. ಇದನ್ನು ಮೂರು ವರ್ಷಗಳ ಕಾಲ ನೀಡಲಾಗುತ್ತದೆ.

ಇದೇ ಸಂದರ್ಭದಲ್ಲಿ ಚೆನ್ನೈಯ ಹಿರಿಯ ಸಂಗೀತ ಗುರುಗಳಾದ ವಿದುಷಿ ಸೀತಾ ನಾರಾಯಣನ್ ಅವರಿಗೆ ಡಾ. ಎಂ.ಎಸ್. ಸುಬ್ಬುಲಕ್ಷ್ಮೀ ಸಂಗೀತ ಪ್ರಾಚಾರ್ಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಈ ಪ್ರಶಸ್ತಿ 1ಲಕ್ಷ ರೂ. ನಗದು, ಪ್ರಶಂಸಾ ಪತ್ರ ಮತ್ತು ಸ್ಮರಣಿಕೆಗಳನ್ನು ಒಳಗೊಂಡಿದೆ.

ಫೆಲೋಶಿಪ್ ಪುರಸ್ಕೃತರನ್ನು ಅಭಿನಂದಿಸಿದ ಕೋಶ್ಯಾರಿ, ಈ ಯುವ ಕಲಾವಿದರು ಸಂಗೀತ ಕ್ಷೇತ್ರದಲ್ಲಿ ಡಾ.ಸುಬ್ಬುಲಕ್ಷ್ಮೀ ಅವರಂತೆ ದೊಡ್ಡ ಸಾಧನೆ ಮಾಡುವಂತಾಗಲಿ ಎಂದು ಹಾರೈಸಿದರು. ಷಣ್ಮುಖಾನಂದ ಫೈನ್ ಆರ್ಟ್ಸ್ ಆ್ಯಂಡ್ ಸಂಗೀತ ಸಭಾದ ಅಧ್ಯಕ್ಷ ಡಾ.ವಿ.ಶಂಕರ್ ಅವರು ಪ್ರಾಸ್ತಾವಿಕ ಭಾಷಣ ಮಾಡಿ ಸಭಾದ ಧ್ಯೇಯೋದ್ದೇಶಗಳನ್ನು ವಿವರಿಸಿದರು. ಗೌರವ ಕಾರ್ಯದರ್ಶಿ ಡಾ.ವಿ.ರಂಗರಾಜ್ ಅವರು ವಂದಿಸಿದರು. ಉಪಾಧ್ಯಕ್ಷ ಪಿ.ಸೇತುರಾಮನ್ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

13/12/2021 03:36 pm

Cinque Terre

2.72 K

Cinque Terre

0

ಸಂಬಂಧಿತ ಸುದ್ದಿ