ಮೂಡುಬಿದಿರೆ: ಕಂಬಳ ಕ್ಷೇತ್ರದಲ್ಲಿ ಸಾಧನೆ ಮಾಡಿ ರಾಷ್ಟ್ರ-ಅಂತರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿರುವ ದಾಖಲೆಯ ಓಟಗಾರ ಕ್ರೀಡಾರತ್ನ ಪುರಸ್ಕೃತ ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ ಅವರಿಗೆ ಅಭಿನಂದನಾ ಸಮಿತಿಯ ವತಿಯಿಂದ ಹುಟ್ಟೂರಿನ ಸನ್ಮಾನ ಕಾರ್ಯಕ್ರಮ ಅಶ್ವತ್ಥಪುರ ಸಂತೆಕಟ್ಟೆಯ ವಿವಿದ್ದೋದ್ಧೇಶ ಸಭಾಂಗಣದಲ್ಲಿ ನಡೆಯಿತು.
ಶಾಸಕ, ಮೂಡುಬಿದಿರೆ ಕಂಬಳ ಸಮಿತಿಯ ಅಧ್ಯಕ್ಷ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆಯನ್ನು ವಹಿಸಿ ಶ್ರೀನಿವಾಸ ಗೌಡ ಅವರನ್ನು ಸನ್ಮಾನಿಸಿದರು. ತನ್ನ ಪ್ರತಿಭೆಯ ಮೂಲಕ ಶ್ರಮಜೀವಿಯಾಗಿ ಸಾಧನೆ ಮಾಡಿ ಸಮಾಜದಲ್ಲಿ ಬೆಳೆದು ನಿಂತಾಗ ಆತನನ್ನು ಶೇ 10ರಷ್ಟು ಜನರು ಮತ್ಸರದಿಂದಲೇ ನೋಡುತ್ತಾರೆ. ಉಳಿದ ಶೇ 90ರಷ್ಟು ಜನರು ಆತನ ಜೊತೆ ಸೇರಿ ಸಂತಸಪಡುತ್ತಾರೆ ಆದರೆ ಇಲ್ಲಿ ಶ್ರೀನಿವಾಸ ಗೌಡರ ಸಾಧನೆಗೆ ಶೇ 100ರಷ್ಟು ಜನರೂ ಪಾಲ್ಗೊಂಡು ಸಂತಸ ವ್ಯಕ್ತಪಡಿಸುತ್ತಿರುವುದು ಶ್ಲಾಘನೀಯ ಎಂದರು.
ಅಶ್ವತ್ಥಪುರ ಶ್ರೀ ಸೀತಾರಾಮಚಂದ್ರ ದೇವಸ್ಥಾನದ ಆಡಳಿತ ಮುಖ್ಯಸ್ಥ ರಘುನಾಥ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಿ, ಶುಭ ಹಾರೈಸಿದರು. ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಶ್ರೀನಿವಾಸ ಗೌಡ ಅವರು ಮಾತಾಪಿತರೂ, ಕೋಣಗಳ ಯುಜಮಾನರುಗಳೂ, ಹಿತೈಷಿಗಳು ಹಾಗೂ ಊರವರ ಸಹಕಾರವನ್ನು ಸ್ಮರಿಸಿಕೊಂಡರು.
ಕೋಣಗಳ ಯಜಮಾನರಾದ ಇರುವೈಲು ಪಾಣಿಲ ಸತೀಶ್ಚಂದ್ರ ಸಾಲ್ಯಾನ್, ಪ್ರಸಾದ್ ನಿಲಯದ ಶಕ್ತಿ ಪ್ರಸಾದ್ ಶೆಟ್ಟಿ ಹಾಗೂ ನ್ಯೂ ಪಡಿವಾಳ್ಸ್ನ ಹರ್ಷವರ್ಧನ್ ಪಡಿವಾಳ್ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉಮಾನಾಥ ದೇವಾಡಿಗ ಅವರನ್ನು ಗೌರವಿಸಲಾಯಿತು.
ತೆಂಕಮಿಜಾರು ಗ್ರಾ.ಪಂ ಅಧ್ಯಕ್ಷೆ ರುಕ್ಮಿಣಿ, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಜಿ.ಪಂನ ನಿಕಟಪೂರ್ವ ಸದಸ್ಯ ಜನಾರ್ದನ ಗೌಡ, ಜಿಲ್ಲಾ ಕಂಬಳ ಸಮಿತಿಯ ಗೌರವ ಸಲಹೆಗಾರ ಭಾಸ್ಕರ್ ಎಸ್.ಕೋಟ್ಯಾನ್, ಕಂಬಳ ಅಕಾಡೆಮಿಯ ಸಂಚಾಲಕ ಕೆ.ಗುಣಪಾಲ ಕಡಂಬ, ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ರೋಹಿತ್ ಹೆಗ್ಡೆ ಎರ್ಮಾಳ್, ಪ್ರಧಾನ ಕಾರ್ಯದರ್ಶಿ ರಕ್ಷಿತ್ ಜೈನ್ ನಾರಾವಿ, ಕೋಶಾಧಿಕಾರಿ ಹರ್ಷವರ್ಧನ್ ಪಡಿವಾಳ್, ಹೊಕ್ಕಾಡಿಗೋಳಿ ಕಂಬಳ ಸಂಘಟಕ ರಶ್ಮಿತ್ ಶೆಟಿ,್ಟ ಶ್ರೀನಿವಾಸ ಗೌಡ ಅವರ ಶಿಕ್ಷಕ ಕೃಷ್ಣಮೂರ್ತಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕುಶಾಲ್ ಕುಮಾರ್ ಎಡಪದವು ಸ್ವಾಗತಿಸಿದರು. ತೀರ್ಪುಗಾರ ಎಡ್ತೂರು ರಾಜೀವ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಎಷ್ಟೇ ಸಾಧನೆ ಮಾಡಿದರೂ ಆರಕ್ಕೇರದೆ ಮೂರಕ್ಕಿಳಿಯದ ವ್ಯಕ್ತಿತ್ವವನ್ನು ಹೊಂದಿರುವವರು ಶ್ರೀನಿವಾಸ ಗೌಡರು. ದುರಹಂಕಾರವಿಲ್ಲದ, ಉತ್ತಮ ಗುಣ ನಡತೆಯೊಂದಿಗೆ ಕ್ರೀಯಾಶೀಲ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡ ಓಟಗಾರ ಎಂದರು.
ಸತೀಶ್ ಹೊಸ್ಮಾರು ಕಾರ್ಯಕ್ರಮ ನಿರೂಪಿಸಿದರು. ಪ್ರಸಾದ್ ಅಶ್ವತ್ಥಪುರ ವಂದಿಸಿದರು. ನಂತರ ಕಲ್ಲಡ್ಕ ವಿಠಲನಾಯಕ್ ಮತ್ತು ಬಳಗದವರಿಂದ ಗೀತಾ ಸಾಹಿತ್ಯ ಸಂಭ್ರಮ ನಡೆಯಿತು.
Kshetra Samachara
21/11/2021 06:59 pm