ಮಟಪಾಡಿ: ಅಪರೂಪದ ಜನಪದ ಕಲೆ ಯಕ್ಷಗಾನ ಗೊಂಬೆಯಾಟ ಪ್ರದರ್ಶನ ಉಡುಪಿ ಜಿಲ್ಲೆಯ ಮಟಪಾಡಿಯಲ್ಲಿ ನಡೆಯಿತು.ಉಪ್ಪಿನಕುದ್ರು ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿ 'ಚೂಡಾಮಣಿ- ಲಂಕಾ ದಹನ' ಪ್ರಸಂಗ ಪ್ರದರ್ಶಿಸಿತು.
ಯಕ್ಷಗಾನ ಪಾತ್ರಧಾರಿಯಂತೆ ವೇಷ ತೊಟ್ಟ ಗೊಂಬೆಗಳನ್ನು ಸೂತ್ರದ ಮೂಲಕ ಕುಣಿಸಿದ ಸೂತ್ರಧಾರ, ಪ್ರತಿ ಗೊಂಬೆ ಕುಣಿತಕ್ಕೆ ಹೊಂದುವಂತೆ ವಿವರ ನೀಡುತ್ತಿದ್ದರು. ಗೊಂಬೆ ಕುಣಿತದ ವೇದಿಕೆಯಲ್ಲಿರುವ ಭಾಗವತರು, ಗೊಂಬೆಗಳ ಕುಣಿತಕ್ಕೆ ತಕ್ಕಂತೆ ಯಕ್ಷಗಾನ, ಪದ್ಯ ಹಾಡುವಾಗ ಚೆಂಡೆ, ಮದ್ದಳೆ, ತಾಳ, ಹಾರ್ಮೊನೀಯಂ ಒಳಗೊಂಡ ಹಿಮ್ಮೇಳದವರು ಸಾಥ್ ನೀಡಿದರು.
ಉಪ್ಪಿನಕುದ್ರು ದೇವಣ್ಣ ಪದ್ಮನಾಭ ಕಾಮತ್ ಮೆಮೋರಿಯಲ್ ಯಕ್ಷಗಾನ ಗೊಂಬೆಯಾಟ ಟ್ರಸ್ಟ್ ನ ಬೆಳ್ಳಿ ಹಬ್ಬದ ಸಂಭ್ರಮ ಹಾಗೂ ಸೂತ್ರ ಕ್ರೀಡೆಯ ಗಾರುಡಿಗ ಕೊಗ್ಗ ದೇವಣ್ಣ ಕಾಮತ್ ಅವರ ಜನ್ಮ ಶತಮಾನೋತ್ಸವ ಪ್ರಯುಕ್ತ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಇದೇ ವೇಳೆ ಉಪ್ಪಿನಕುದ್ರು ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿ ಮುಖ್ಯಸ್ಥ ಭಾಸ್ಕರ್ ಕಾಮತ್ ಅವರನ್ನು ಸನ್ಮಾನಿಸಲಾಯಿತು.
ಶ್ರೀ ನಂದಿಕೇಶ್ವರ ಯಕ್ಷಗಾನ ಕಲಾ ಮಂಡಳಿ ಮಟಪಾಡಿ, ಬ್ರಹ್ಮಾವರ ಗೌರವಾಧ್ಯಕ್ಷ ಚಂದ್ರಶೇಖರ ಕಲ್ಕೂರ, ಅಧ್ಯಕ್ಷ ಸ್ಯಾಮ್ಸನ್ ಸಿಕ್ವೇರಾ, ಸೊರ್ಪು ಸದಾನಂದ ಪಾಟೀಲ್, ಸಂಘದ ಸದಸ್ಯರು ಪಾಲ್ಗೊಂಡಿದ್ದರು. ಚೇತನ್ ಮಟಪಾಡಿ ಸ್ವಾಗತಿಸಿ, ನಿರೂಪಿಸಿದರು. ಶರೋನ್ ಸಿಕ್ವೇರಾ ವಂದಿಸಿದರು.
Kshetra Samachara
13/11/2021 01:00 pm