ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಈ ಕಲಾ ಬೆಡಗಿಯದ್ದು "ಅನುಪಮ" ಕಲಾ ಸೇವೆ!

ಉಡುಪಿ: ಕಾಟುಕುಕ್ಕೆಯ ಗ್ರಾಮೀಣ ಪ್ರದೇಶದ ಕಲಾ ಬೆಡಗಿ ಅನುಪಮಾ, ವಂಶವಾಹಿನಿಯಾಗಿ ಬಂದ ಕಲೆಯ ಪರಿಮಳದ ಜೊತೆಗೆ ತನ್ನ ಸಾಧನೆಯ ಮೆರುಗನ್ನು ಬೆರೆಸಿ "ಕುಂಚದ ಬೆಡಗಿ" ಎಂದು ಗುರುತಿಸಲ್ಪಟ್ಟ ಕಲಾ ಮಾತೆಯ ಮಗಳು. ಖ್ಯಾತ ಕಾಷ್ಠ ಶಿಲ್ಪಿ ಮತ್ತು ಕಾರ್ಟೂನಿಸ್ಟ್ ಜಿ.ಕೆ.ಭಟ್ ಹಾಗು ಜಯಲಕ್ಷ್ಮಿ ಅವರ ಸುಪುತ್ರಿ.ಇವರ ಮನೆಯೇ ಒಂದು ಕಲಾಮಂದಿರ. ಗೋಡೆಯ ತುಂಬ ಸೆರಾಮಿಕ್ ಮ್ಯೂರಲ್ ಪೈಂಟಿಂಗ್ನಿಂದ ಆಧ್ಯಾತ್ಮಿಕ ಸಂವೇದನೆಯನ್ನು ಉಂಟುಮಾಡುತ್ತಾ ಆಧುನಿಕತೆಯ ಸ್ಪರ್ಶದೊಂದಿಗೆ ಇವು ನೋಡುಗರ ಮೈನವಿರೇಳಿಸುತ್ತದೆ. ಇದಲ್ಲದೆ ಪಾಟ್ ಪೈಂಟಿಂಗ್ ಮತ್ತು ತೈಲವರ್ಣ ರಚನೆಯಲ್ಲೂ ಇವರು ಪರಿಣಿತೆ. ಚಿಕ್ಕ ವಯಸ್ಸಿನಲ್ಲಿ ಪೂರಕ ವಾತಾವರಣದೊಂದಿಗೆ ಬೆಳೆದ ಈಕೆ  ಗಿಲಿಗಿಲಿ ಮ್ಯಾಜಿಕ್ ಖ್ಯಾತಿಯ ಶಂಕರ್ ಅವರ ತಂಡದಲ್ಲಿ ಸುಮಾರು ಏಳು ವರ್ಷಗಳ ಕಾಲ ಹಲವಾರು ವೇದಿಕೆಗಳಲ್ಲಿ ಕಾಣಿಸಿಕೊಂಡಿದ್ದರು.

ಶಿಕ್ಷಣ ಪಡೆಯುತ್ತಿರುವ ಸಂಧರ್ಭದಲ್ಲಿಯೇ ಚಿತ್ರ ರಚನೆಯಲ್ಲಿ ಹಲವಾರು ಬಹುಮಾನಗಳನ್ನು ಗಿಟ್ಟಿಸಿಕೊಂಡರು. ತನ್ನ ಕಲಾಕೃತಿಗಳಿಗೆ "ಅನುರೂಪಿಕಾ" ಎಂಬ ವಿಶಿಷ್ಟ ನಾಮಧೇಯವನ್ನು ಇರಿಸಿಕೊಂಡು ಅಲ್ಲೂ ಕೂಡ ಈಕೆ  ಯಾರ ಅನುಕರಣೆ ಇಲ್ಲದೇ ತಮ್ಮತನವನ್ನು ಉಳಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ. ಸೆರಾಮಿಕ್ ಹುಡಿಯನ್ನು ಫೆವಿಕಾಲ್ನೊಂದಿಗೆ ಬೆರೆಸಿ ಪ್ಲೈವುಡ್ ಹಲಗೆಯ ಮೇಲೆ ಆಧ್ಯಾತ್ಮಿಕ ಅರ್ಥ ಬರುವಂತಹ ದೃಶ್ಯಗಳನ್ನು ಕಲಾ ಆರಾಧಕರ ಮನ ಮುಟ್ಟುವಂತೆ ಚಿತ್ರಿಸುವುದು ಈಕೆಯ ವೈಶಿಷ್ಟ್ಯ. ಇಂತಹ ನೂರಾರು ಕೃತಿಗಳು ಈಗಾಗಲೇ ಕಲಾಜಗತ್ತಿಗೆ ಸಮರ್ಪಣೆಗೊಂಡಿವೆ.

ಇದಲ್ಲದೆ ಅನುಪಮ ಅವರು ನಾವು ಸಾಮಾನ್ಯವಾಗಿ ಯಾವುದೆಲ್ಲಾ ನಿರುಪಯೋಗಿ ವಸ್ತುಗಳೆಂದು ಪರಿಗಣಿಸಿ ಮೂಲೆಗೆಸೆಯುತ್ತೇವೊ ಅದರಿಂದ ಸುಂದರ ಕಲಾಕೃತಿಗಳನ್ನು ತಯಾರಿಸಬಲ್ಲ ಚಾತುರ್ಯವನ್ನು ಮೈಗೂಡಿಸಿಕೊಂಡಿದ್ದಾರೆ. ಪಿವಿಸಿ ಪೈಪ್ ತುಂಡು, ಶಂಖ, ಕಪ್ಪೆ ಚಿಪ್ಪು, ಪಿಸ್ತದ ಸಿಪ್ಪೆ, ಮರ ಮತ್ತು ಬಿದಿರಿನ ತುಂಡು ಹೀಗೆ ನಾವು ಕಸವೆಂದು ಪರಿಗಣಿಸಿದ್ದೆಲ್ಲಾ ಈ ಕಲಾವಿದೆ ಕೈಯಲ್ಲಿ ನೋಡುಗರ ಕಣ್ಣಿಗೆ ರಸದೌತಣ ನೀಡುವ ಕಲಾ ಕೌತುಕವಾಗುತ್ತದೆ. ನಿಜ ಅರ್ಥದಲ್ಲಿ ಓರ್ವ ಪ್ರಕೃತಿ ಮಾತೆಯ ಮಡಿಲಿನ ಮಗುವಾಗಿ ಗೋಚರಿಸುವುದು ಶ್ಲಾಘನೀಯ ವಿಚಾರ.

ಈಕೆ ಆಕ್ರಲಿಕ್ ಹಾಗೂ ಫ್ಯಾಬ್ರಿಕ್ ಪೈಂಟಿಂಗ್ನಲ್ಲಿ ಕೂಡ ನಿಪುಣೆ. ಇದಕ್ಕೂ ವಿಪರೀತ ಬೇಡಿಕೆಯಿದೆ. ಇವರ ಕಲಾಕೃತಿಯ ಪ್ರದರ್ಶನ ಈಗಾಗಲೇ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಕಡೆಗಳಲ್ಲಿ ನಡೆದಿದ್ದು,ಹತ್ತಾರು ಪ್ರಶಸ್ತಿಗಳು ಇವರನ್ನು ಅರಸಿಕೊಂಡು ಬಂದಿವೆ.

Edited By : PublicNext Desk
Kshetra Samachara

Kshetra Samachara

06/11/2021 06:18 pm

Cinque Terre

37.01 K

Cinque Terre

0