ಪುತ್ತೂರು: ಉಪ್ಪಿನಂಗಡಿ ಗ್ರಾಮದ ಕದಿಕ್ಕಾರು ಬೀಡಿನ ಬಳಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸೇರಿಸ ೧.೬ ಎಕರೆ ಜಾಗದಲ್ಲಿ ಹಲವು ವರ್ಷಗಳಿಂದ ಮನೆ ಕಟ್ಟಿ ವಾಸಿಸುತ್ತಿರುವ ಪರಿಶಿಷ್ಟ ಜಾತಿಗೆ ಸೇರಿರುವ 18 ಕುಟುಂಬಗಳಿಗೆ ವಾಸಸ್ಥಳವನ್ನು ಶ್ರೀ ಕ್ಷೇತ್ರದ ವತಿಯಿಂದ ದಾನ ರೂಪದಲ್ಲಿ ನೀಡಲಾಗಿದ್ದು ಅ.12 ರಂದು ಹಕ್ಕುಪತ್ರ ವಿತರಣೆಯು ಸಹಾಯಕ ಆಯುಕ್ತರ ಕಚೇರಿ ಸಭಾಂಗಣದಲ್ಲಿ ನಡೆಯಿತು.
ಸಬ್ ರಿಜಿಸ್ಟಾçರ್ ಕಚೇರಿಯಲ್ಲಿ ಭೂ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಿದ ನಂತರ ಶ್ರೀ ಕ್ಷೇತ್ರದ ಪರವಾಗಿ ಡಿ.ಹರ್ಷೇಂದ್ರ ಕುಮಾರ್ ಅವರು 18 ಕುಟುಂಬಗಳಿಗೆ ಹಕ್ಕುಪತ್ರ ಹಸ್ತಾಂತರಿಸಿದರು. ಇದೇ ಸಂದರ್ಭದಲ್ಲಿ ಎಲ್ಲ ಕುಟುಂಬಕ್ಕೆ ವಸ್ತçದಾನ ಮಾಡಲಾಯಿತು. ಬಳಿಕ ಮಾತನಾಡಿದ ಅವರು, ಉಳುವನೆ ಹೊಲದೊಡೆಯ ಕಾನೂನು ಜಾರಿಯ ಸಂದರ್ಭದಲ್ಲಿ ಧರ್ಮಸ್ಥಳ ಕ್ಷೇತ್ರಕ್ಕೆ ಸೇರಿದ 3600 ಎಕರೆ ಜಮೀನನ್ನು ಗೇಣಿದಾರರಿಗೆ ನೀಡಲಾಗಿತ್ತು. ಆ ಕಾಲದಿಂದಲೇ ಕದಿಕ್ಕಾರು ಬೀಡಿನ ಜಾಗದಲ್ಲಿ ವಾಸವಾಗಿದ್ದ ಕುಟುಂಬಗಳು ಕ್ಷೇತ್ರದ ಮೇಲಿನ ಭಕ್ತಿಯಿಂದ ಡಿಕ್ಲೆರೇಷನ್‌ಗೆ ಅರ್ಜಿ ಹಾಕಿರಲಿಲ್ಲ. ಆ ಕುಟುಂಬಕ್ಕೆ ಕ್ಷೇತ್ರದ ವತಿಯಿಂದ ಹಕ್ಕುಪತ್ರ ಮಾಡಿ ದಾನ ರೂಪದಲ್ಲಿ ಜಮೀನು ನೀಡಲಾಗಿದೆ ಎಂದರು.
ಸುಳ್ಯ ತಾಲೂಕಿನ ಮರ್ಕಂಜದಲ್ಲಿ 15 ಕುಟುಂಬಗಳು ಶ್ರೀಕ್ಷೇತ್ರದ ಅಧೀನದಲ್ಲಿರುವ ಜಾಗದಲ್ಲಿ ಮನೆ ಕಟ್ಟಿಕೊಂಡು ವಾಸವಾಗಿದ್ದು ಅವರಿಗೂ ದಾನ ರೂಪದಲ್ಲಿ ಹಕ್ಕುಪತ್ರ ನೀಡಲಾಗುವುದು ಎಂದು ಅವರು ಹೇಳಿದರು.
Kshetra Samachara
12/10/2021 09:29 pm