ಮೂಡುಬಿದಿರೆ: ದ.ಕ., ಉಡುಪಿ ಮತ್ತು ಕಾಸರಗೋಡು ಜಿಲ್ಲಾ ವ್ಯಾಪ್ತಿ ಹೊಂದಿರುವ ಕಂಬಳ ಸಂರಕ್ಷಣೆ, ನಿರ್ವಹಣೆ ಮತ್ತು ತರಬೇತಿ ಅಕಾಡೆವಿ ವತಿಯಿಂದ ಮೂಡುಬಿದಿರೆ ಒಂಟಿಕಟ್ಟೆಯಲ್ಲಿರುವ ವೀರ ರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮದ ಕೋಟಿ -ಚೆನ್ನಯ ಕಂಬಳ ಕ್ರೀಡಾಂಗಣದಲ್ಲಿ 6ನೇ ವರ್ಷದ ಕಂಬಳ ಓಟಗಾರ ತರಬೇತಿ ಶಿಬಿರವು ಸೆ.19ರಿಂದ ಅ.4ರವರೆಗೆ ನಡೆಯಲಿದೆ ಎಂದು ಅಕಾಡೆಮಿ ಸಂಚಾಲಕ ಕೆ. ಗುಣಪಾಲ ಕಡಂಬ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸೆ.19ರಂದು ಬೆಳಗ್ಗೆ 10 ಗಂಟೆಗೆ ಅದಾನಿ ಗ್ರೂಪ್ಸ್ನ ಆಡಳಿತ ನಿರ್ದೇಶಕ ಕಿಶೋರ್ ಆಳ್ವ ಅವರ ಅಧ್ಯಕ್ಷತೆಯಲ್ಲಿ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಶಿಬಿರವನ್ನು ಉದ್ಘಾಟಿಸಲಿದ್ದಾರೆ. ಅ.4ರಂದು ಕೆ. ಗುಣಪಾಲ ಕಡಂಬರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಶಾಸಕ ಉಮಾನಾಥ ಕೋಟ್ಯಾನ್ ಸಹಿತ ಗಣ್ಯರು ಭಾಗವಹಿಸಲಿರುವರು.
ಹಗ್ಗ ನೆಯ್ಗೆ, ಬೆತ್ತ ತಯಾರಿ, ಮರ ಬಿಗಿಯುವುದು ಕರಕುಶಲ ವೃತ್ತಿಗಳ ಬಗ್ಗೆಯೂ ತರಬೇತಿ ನೀಡಲಾಗುವುದು. ಶಬಿರದ ಪ್ರತಿ ದಿನ ಸಾಯಂಕಾಲ 7 ಗಂಟೆಗೆ ವಿಮೆ, ಕಂಬಳದ ಪ್ರಾಧನ್ಯತೆ, ತುಳುನಾಡ ಸಂಸ್ಕೃತಿ, ಕಂಬಳ ಕೋಣಗಳ ಹಾರೈಕೆ, ಓಟಗಾರರ ದೈಹಿಕ ಕ್ಷಮತೆ ಸಹಿತ ವಿವಿಧ ವಿಚಾರಗಳ ಕುರಿತು ಆಯಾ ಕ್ಷೇತ್ರದ ಪರಿಣಿತರು ತರಬೇತಿ ನೀಡಲಿದ್ದಾರೆ. ಸರಪಾಡಿಯ ಜೋನ್ ಸಿರಿಲ್ ಡಿಸೋಜ ಶಿಬಿರಾಧಿಕಾರಿಯಾಗಿದ್ದು, ಆಳ್ವಾಸ್ ಶಿಕ್ಷಣ ಸಂಸ್ಥೆಯವರು ಯೋಗ ತರಬೇತಿ, ರಾಷ್ಟ್ರೀಯ ತರಬೇತುದಾರರಾದ ವಸಂತ ಜೋಗಿ ಮತ್ತು ಶಾಂತರಾಮ್ ವ್ಯಾಯಾಮ ತರಬೇತಿ ನೀಡಲಿದ್ದಾರೆ.
219 ಮಂದಿ ಈ ಬಾರಿಯ ಆಯ್ಕೆ ಶಿಬಿರಕ್ಕೆ ಬಂದಿದ್ದು ಅವರಲ್ಲಿ ಮೊದಲಸುತ್ತಿನಲ್ಲಿ 84 ಮಂದಿ, ಅಂತಿಮವಾಗಿ 30 ಮಂದಿಯನ್ನು ಶಿಬಿರಕ್ಕೆ ಆರಿಸಲಾಗಿದೆ. ಟ್ರ‍್ಯಾಕ್ ಸ್ಯೂಟ್, ಇತರ ಆವಶ್ಯಕ ದಿರಿಸು, ಉತ್ತಮ ಆಹಾರ ಮೊದಲಾದ ಸೌಲಭ್ಯಗಳನ್ನು ಪೂರ್ಣ ಉಚಿತವಾಗಿ ಒದಗಿಸಲಾಗುವುದು. ಈಗಾಗಲೇ ಚಾಲ್ತಿಯಲ್ಲಿರುವ ಓಟಗಾರರಿಗೂ ರಿಫ್ರೆಶರ್ ಕೋರ್ಸ್ ನಡೆಸುವ ಯೋಜನೆಯಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅಕಾಡೆಮಿಯ ಪ್ರಮುಖರಾದ ಈದು ಪಾಡ್ಯಾರಮನೆ ಜ್ವಾಲಾಪ್ರಸಾದ್, ರೆಂಜಾಳಕಾರ್ಯ ಸುರೇಶ್ ಕೆ. ಪೂಜಾರಿ, ಕೆಲ್ಲಪುತ್ತಿಗೆ ಸುಭಾಸ್‌ಚಂದ್ರ ಚೌಟ, ಸರಪಾಡಿ ಜೋನ್ ಸಿರಿಲ್ ಡಿಸೋಜ ಉಪಸ್ಥಿತರಿದ್ದರು.
Kshetra Samachara
17/09/2021 08:05 pm