ಮುಲ್ಕಿ: ಮುಲ್ಕಿ ಸಮೀಪದ ಅತಿಕಾರಿಬೆಟ್ಟು ಹಾಲು ಉತ್ಪಾದಕರ ಸಹಕಾರ ಸಂಘ(ನಿ) ವಾರ್ಷಿಕ ಮಹಾಸಭೆ ಸಂಘದ ಸಭಾಭವನದಲ್ಲಿ ನಡೆಯಿತು. ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ದ.ಕ ಹಾಲು ಒಕ್ಕೂಟದ ವ್ಯವಸ್ಥಾಪಕರಾದ ಡಾ.ನಿತ್ಯಾನಂದ ಭಕ್ತ ಮಾತನಾಡಿ ಆಧುನಿಕ ಹಾಗೂ ಲಾಭದಾಯಕ ಹೈನುಗಾರಿಕೆ, ಜಾನುವಾರು ಸಾಕಾಣಿಕೆಯ ಕ್ರಮಗಳು, ಶುದ್ಧ ಹಾಗೂ ಗುಣಮಟ್ಟದ ಹಾಲು ಉತ್ಪಾದನೆ ಬಗ್ಗೆ ಮಾಹಿತಿ ನೀಡಿದರು.ದ.ಕ. ಹಾಲು ವಿಸ್ತರಣಾಧಿಕಾರಿ ಸರೋಜಿನಿಯವರು ಸಂಘದ ಲೆಕ್ಕ ಪರಿಶೋಧಿತ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಸಂಘದ ಅಧ್ಯಕ್ಷರಾದ ಗಂಗಾಧರ ಶೆಟ್ಟಿ ಮಾತನಾಡಿ ಸಂಘವು ಗ್ರಾಮೀಣ ಪ್ರದೇಶದಲ್ಲಿ ರೈತರಿಗೆ ಹೈನುಗಾರಿಕೆ ಸಹಿತ ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದು ಸಂಘದ ಸದಸ್ಯರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಸಂಘಕ್ಕೆ 20 21- 22 ಸಾಲಿನಲ್ಲಿ ಲೆಕ್ಕ ಪರಿಶೋಧನೆಯಲ್ಲಿ 'ಎ' ಗ್ರೇಡ್ ಸಿಕ್ಕಿದ್ದು ರೂ. 9,97,398.00 ನಿವ್ವಳ ಲಾಭ ಬಂದಿದ್ದು 4,76,000.00 ಬೋನಸ್ ಹಾಗೂ ಶೇ 10 ಡಿವಿಡೆಂಟ್ ಸದಸ್ಯರಿಗೆ ವಿತರಿಸಲಾಯಿತು.
ಸಭೆಯಲ್ಲಿ 2020-21ನೇ ಸಾಲಿನಲ್ಲಿ ಸಂಘಕ್ಕೆಅಧಿಕ ಹಾಲು ಸರಬರಾಜು ಮಾಡಿದ ರಾಕೇಶ್ ಕಾಮತ್ (ಪ್ರ), ಪ್ಲೇವಿ ಡಿಸೋಜಾ(ದ್ವಿ),ಫಯಾಜ್ ಅಹಮದ್(ತೃ) ರವರಿಗೆ ಬಹುಮಾನಗಳನ್ನು ವಿತರಿಸಲಾಯಿತು.2020-21 ರ ಶೈಕ್ಷಣಿಕ ವರ್ಷದಲ್ಲಿ ಅಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು
ಅತಿಕಾರಿಬೆಟ್ಟು ಗ್ರಾಪಂ ಅಧ್ಯಕ್ಷ ಮನೋಹರ ಕೋಟ್ಯಾನ್,ಸಂಘದ ನಿರ್ದೇಶಕರುಗಳಾದ ಕೃಷ್ಣ.ಆರ್ ಶೆಟ್ಟಿ ,ರತ್ನಾಕರ ಶೆಟ್ಟಿ,ಹರೀಶ ಶೆಟ್ಟಿ, ಗಂಗಾಧರ ದೇವಾಡಿಗ ,ರತ್ನವರ್ಮ ಶೆಟ್ಟಿ, ಹೇಮಂತ ಶೆಟ್ಟಿ, ವೆಂಕಟೇಶ, ಅನಂತ ಕಾಮತ್, ಫ್ಲೇವಿ ಡಿಸೋಜಾ, ದೇವಕಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
Kshetra Samachara
07/09/2021 07:30 am