ಮುಲ್ಕಿ: ಕದಿಕೆ ಟ್ರಸ್ಟ್ ಕಾರ್ಕಳ, ಕಿನ್ನಿಗೋಳಿಯ ತಾಳಿಪಾಡಿ ನೇಕಾರ ಸಂಘದಲ್ಲಿ ನಬಾರ್ಡ್ ಪ್ರಾಯೋಜಕತ್ವದಲ್ಲಿ ನಡೆಸಿದ 150 ದಿನಗಳ ಉಡುಪಿ ಸೀರೆ ನೇಯ್ಗೆ ಮತ್ತು ಇತರ ತರಬೇತಿಯ ಸಮಾರೋಪ ಸಮಾರಂಭ ತಾಳಿಪಾಡಿ ನೇಕಾರ ಸಂಘದಲ್ಲಿ ಜರಗಿತು.
ಕಾರ್ಯಕ್ರಮದಲ್ಲಿ ನಬಾರ್ಡ್ ಡಿಡಿಎಂ ಸಂಗೀತ ಕರ್ತಾ ಅವರು ಮಾತನಾಡಿ, ನವ ನೇಕಾರರಿಗೆ ಶುಭಹಾರೈಸಿ ಕದಿಕೆ ಟ್ರಸ್ಟ್ ನಡೆಸಿದ ಯಶಸ್ವಿ ಕಾರ್ಯಕ್ರಮವನ್ನು ಶ್ಲಾಘಿಸಿದರು. ಕಿನ್ನಿಗೋಳಿ ಯೂನಿಯನ್ ಬ್ಯಾಂಕ್ ಚೀಫ್ ಮ್ಯಾನೇಜರ್ ಜೆರಾಲ್ಡ್ ರೇಗೊ ಮಾತನಾಡಿ, ನವ ನೇಕಾರರಿಗೆ ತಮ್ಮ ಬ್ಯಾಂಕಿನಿಂದ ಸಿಗುವ ಸವಲತ್ತುಗಳ ಬಗ್ಗೆ ತಿಳಿಸಿದರು.
ನೇಕಾರ ರತ್ನ ಪ್ರಶಸ್ತಿ ವಿಜೇತರಾದ ಹಿರಿಯ ನೇಕಾರ ಸಂಜೀವ ಶೆಟ್ಟಿಗಾರ್ ಕಿರಿಯ ನೇಕಾರರಿಗೆ ಕಿವಿ ಮಾತು ಹೇಳಿದರು. ಕದಿಕೆ ಟ್ರಸ್ಟ್ ಅಧ್ಯಕ್ಷೆ ಮಮತಾ ರೈ ತರಬೇತಿಯಲ್ಲಿ ನೇಯ್ಗೆ ಮಾತ್ರವಲ್ಲದೆ ಹಾಸು ಮಾಡುವುದು, ವಿನ್ಯಾಸ, ಸಹಜ ಮತ್ತು ಇತರ ಬಣ್ಣಗಾರಿಕೆ , ಎಂಬ್ರಾಯ್ಡರಿ, ಬ್ಲಾಕ್ ಪ್ರಿಂಟ್ ಜತೆಗೆ ಆರೋಗ್ಯ ವಿಚಾರ,ವ್ಯಕ್ತಿತ್ವ ವಿಕಸನ ಬಗ್ಗೆಯೂ ನವ ನೇಕಾರರು ತರಬೇತಿ ಪಡೆದ ಬಗ್ಗೆ ಮತ್ತು ಈಗ ಉಭಯ ಜಿಲ್ಲೆಗಳಲ್ಲಿ ನೇಕಾರ ಸಂಖ್ಯೆ 42 ರಿಂದ 73 ಆದ ಬಗ್ಗೆ ತಿಳಿಸಿದರು.
ತಾಳಿಪಾಡಿ ನೇಕಾರ ಸಂಘದ ಅಧ್ಯಕ್ಷ ಆನಂದ ಶೆಟ್ಟಿಗಾರ್ ಕಾರ್ಯಕ್ರಮದ ಯಶಸ್ಸಿಗೆ ಕದಿಕೆ ಟ್ರಸ್ಟ್ ಗೆ ಅಭಿನಂದನೆ ಸಲ್ಲಿಸಿದರು. ನವ ನೇಕಾರರು ತಮ್ಮ ಅನುಭವ ಹಂಚಿಕೊಂಡ ನಂತರ ಅವರಿಗೆ ಪ್ರಮಾಣ ಪತ್ರವನ್ನು ನೀಡಲಾಯಿತು.
Kshetra Samachara
04/09/2021 06:43 pm