ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ರಂಗಸ್ಥಳದಲ್ಲಿ ಪಾತ್ರ ಮಾಡುತ್ತಿರುವಾಗಲೇ ತಲೆತಿರುಗಿ ಬಿದ್ದ ಯಕ್ಷಗಾನ ಕಲಾವಿದ: ಚೇತರಿಕೆ ಬಳಿಕ ಯಕ್ಷಗಾನ ಸುಸಾಂಗ

ಮಂಗಳೂರು: ಯಕ್ಷಗಾನ ನಡೆಯುತ್ತಿರುವಾಗಲೇ ಪ್ರಖ್ಯಾತ ವೇಷಧಾರಿ ಮೋಹನ ಕುಮಾರ್ ಅಮ್ಮುಂಜೆಯವರು ರಂಗಸ್ಥಳದಲ್ಲಿಯೇ ತಲೆತಿರುಗಿ ಬಿದ್ದಿರುವ ಘಟನೆ ನಿನ್ನೆ ಮೂಡುಬಿದಿರೆ ತಾಲೂಕಿನ ಅಲಂಗಾರು ಶ್ರೀಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ನಡೆದಿದೆ.

ದ.ಕ.ಜಿಲ್ಲೆಯ ಪ್ರಸಿದ್ಧ ಯಕ್ಷಗಾನ ಕಲಾವಿದರ ಕೂಡುವಿಕೆಯಲ್ಲಿ ನಿನ್ನೆ ರಾತ್ರಿ 'ಕರ್ಣಪರ್ವ' ಯಕ್ಷಗಾನ ನಡೆಯುತ್ತಿತ್ತು. ಮೋಹನ ಕುಮಾರ್ ಅಮ್ಮುಂಜೆಯವರು 'ಕರ್ಣಪರ್ವ'ದ 'ಅರ್ಜುನ' ಪಾತ್ರಧಾರಿಯಾಗಿಯೂ ಗಣೇಶ್ ಶೆಟ್ಟಿ ಕನ್ನಡಿಕಟ್ಟೆಯವರು 'ಕರ್ಣ' ಪಾತ್ರಧಾರಿಯಾಗಿದ್ದರು. ಅರ್ಜುನ - ಕರ್ಣ ಪಾತ್ರಗಳ ಮುಖಾಮುಖಿಯಾಗಿ ವಾಕ್ಸಮರ ನಡೆಯುತ್ತಿತ್ತು. ನಿರರ್ಗಳವಾಗಿ ಮಾತನಾಡಿದ ಅಮ್ಮುಂಜೆಯವರ ಬಳಿಕ ಭಾಗವತರು ಕರ್ಣನಿಗೆ ವೀರರಸದ ಪದ್ಯ ಎತ್ತಿ ಕೊಟ್ಟರು. ಕರ್ಣ ಪಾತ್ರಧಾರಿ ಗಣೇಶ ಶೆಟ್ಟಿ ಕನ್ನಡಿಕಟ್ಟೆಯವರು ಕುಣಿಯಲು ಆರಂಭಿಸಿದ್ದಾರೆ‌.

ಈ ಸಂದರ್ಭ ನಿಂತಿದ್ದ ಅರ್ಜುನ ಪಾತ್ರಧಾರಿ ಮೋಹನ ಕುಮಾರ್ ಅಮ್ಮುಂಜೆಯವರು ಸ್ವಲ್ಪ ಓಲಾಡುವಂತೆ ಆಗಿ ಏಕಾಏಕಿ ಎರಡು ಹೆಜ್ಜೆ ಮುಂದೆ ಬಂದು ಮುಗ್ಗರಿಸಿ ಬಿದ್ದಿದ್ದಾರೆ. ರಂಗಸ್ಥಳದಲ್ಲಿದ್ದ ಹಿಮ್ಮೇಳ-ಮುಮ್ಮೇಳದ ಕಲಾವಿದರು ಒಂದು ಕ್ಷಣಕ್ಕೆ ಏನಾಗುತ್ತಿದೆ ಎಂದು ತಿಳಿಯದೆ ಗಾಬರಿಗೊಂಡಿದ್ದಾರೆ‌. ಬಳಿಕ ಸ್ವಲ್ಪ ಉಪಚಾರ ಮಾಡಿದ ಕೊಂಚ ಹೊತ್ತಿನಲ್ಲಿಯೇ ಮೋಹನ ಕುಮಾರ್ ಅಮ್ಮುಂಜೆಯವರು ಚೇತರಿಕೆ ಕಂಡಿದ್ದಾರೆ‌. ಈ ಬಗ್ಗೆ ಸ್ವತಃ ಮೋಹನ ಕುಮಾರ್ ಅಮ್ಮುಂಜೆಯವರೇ ಆಡಿಯೋ ಮೂಲಕ 'ಲಾಕ್ ಡೌನ್ ನಿಂದ ಐದಾರು ತಿಂಗಳು ಯಕ್ಷಗಾನ ಇಲ್ಲದಿದ್ದರಿಂದ ಫೋಕಸ್ ಲೈಟ್ ನಿಂದ ಸ್ವಲ್ಪ ತಲೆ ತಿರುಗಿ ಬಿದ್ದದ್ದು ಹೌದು. ಆದರೆ ಯಕ್ಷಾಭಿಮಾನಿಗಳು ಗಾಬರಿಯಾಗುವುದು ಬೇಡ. ಇದೀಗ ಚೇತರಿಕೆ ಕಂಡಿದ್ದೇನೆ' ಎಂದು ಹೇಳಿದ್ದಾರೆ. ಬಳಿಕ ಯಕ್ಷಗಾನವೂ ಸುಸಾಂಗವಾಗಿ ನಡೆದಿದೆ‌. ಅರ್ಜುನ ಪಾತ್ರಧಾರಿಯಾಗಿ ಮೋಹನ ಕುಮಾರ್ ಅಮ್ಮುಂಜೆಯವರೇ ಪಾತ್ರ ಮುನ್ನಡೆಸಿದ್ದಾರೆ.

Edited By : Manjunath H D
Kshetra Samachara

Kshetra Samachara

10/08/2021 12:10 pm

Cinque Terre

8.48 K

Cinque Terre

0

ಸಂಬಂಧಿತ ಸುದ್ದಿ