ಮುಲ್ಕಿ: ಇಂದಿನ ದಿನಗಳಲ್ಲಿ ಡೋಂಗಿ ಹಿಂದುತ್ವದ ಮೂಲಕ ಯುವ ಸಮುದಾಯದ ಹಾದಿಯನ್ನು ತಪ್ಪಿಸುವ ಕಾರ್ಯ ನಡೆಯುತ್ತಿದೆ. ಬ್ರಹ್ಮಶ್ರೀ ನಾರಾಯಣ ಗುರುಗಳು ಪ್ರತಿಪಾದಿಸಿದ ಹಿಂದುತ್ವಕ್ಕೆ ತಲೆ ಬಾಗುತ್ತೇನೆ ಹೊರತು ಇಂದಿನ ದಿನಗಳಲ್ಲಿ ರಾಜಕೀಯ ಅಸ್ತಿತ್ವಕ್ಕಾಗಿ ಅನುಸರಿಸುತ್ತಿರುವ ಡೋಂಗಿ ಹಿಂದುತ್ವಕ್ಕೆ ತಲೆ ಬಾಗುವುದಿಲ್ಲ ಎಂದು ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಹೇಳಿದ್ದಾರೆ.
ರಾಷ್ತ್ರೀಯ ಬಿಲ್ಲವರ ಮಹಾ ಮಂಡಲದ ವತಿಯಿಂದ ಮುಲ್ಕಿಯ ರಾಷ್ತ್ರೀಯ ಬಿಲ್ಲವರ ಮಹಾ ಮಂಡಲದ ಸಭಾಂಗಣದಲ್ಲಿ ಜರಗಿದ ಸಮಾಜದ ಪತ್ರಕರ್ತರು, ವಿವಿಧ ಮಾಧ್ಯಮ ಪ್ರತಿನಿಧಿಗಳ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಸಮಾಜದ ಯುವಕರು ಇಂದಿನ ದಿನಗಳಲ್ಲಿ ಅಮಿಷಗಳಿಗೆ ಬಲಿಯಾಗಿ ದುಷ್ಚಟದತ್ತ ವಾಲುತ್ತಿದ್ದು ನಾರಾಯಣ ಗುರುಗಳ ಸಂದೇಶದಂತೆ ಸರಳ ವಿವಾಹ, ಮೆಹಂದಿಯಂತಹ ಕಾರ್ಯಕ್ರಮಗಳಲ್ಲಿ ಕಟ್ಟು ನಿಟ್ಟಾಗಿ ಮದ್ಯ ಪಾನ ನಿಷೇಧ, ಯುವ ಸಮುದಾಯಕ್ಕೆ ಉದ್ಯೋಗಕ್ಕೆ ಹೆಚ್ಚಿನ ಅವಕಾಶವನ್ನು ನೀಡುವಂತಹ ಕಾರ್ಯವನ್ನು ಮಹಾ ಮಂಡಲದ ಮೂಲಕ ನಡೆಸಬೇಕು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಮಹಾ ಮಂಡಲದ ಅಧ್ಯಕ್ಷ ಡಾ. ರಾಜ್ ಶೇಖರ ಕೋಟ್ಯಾನ್ ಮಾತನಾಡಿ, ಸಮಾಜವು ಜನ ಸಂಖ್ಯೆಯಲ್ಲಿ ಹೆಚ್ಚಿದ್ದರೂ ರಾಜಕೀಯ ಸ್ಥಾನಮಾನದಲ್ಲಿ ಹಿಂದುಳಿದಿದೆ. ರಾಜಕೀಯವಾಗಿ ಬೆಳೆದಾಗ ಸಮಾಜಕ್ಕೆ ಶಕ್ತಿಯು ಬರಲು ಸಾಧ್ಯವಿದೆ. ಈಡಿಗ, ಬಿಲ್ಲವ ನಿಗಮ, ಸಮಾಜಕ್ಕೆ ಮೀಸಲಾತಿ ಬಗ್ಗೆ ಹೋರಾಟ ನಡೆಸಬೇಕಾದ ಪರಿಸ್ತಿತಿ ನಿರ್ಮಾಣವಾಗಿದೆ. ಬಿಲ್ಲವ ಸಮುದಾಯಕ್ಕೆ ಅನ್ಯಾಯವಾದಲ್ಲಿ ಬಿಲ್ಲವ ಮಹಾ ಮಂಡಲ ಮುಂದೆ ನಿಂತು ಹೋರಾಟ ನಡೆಸಲಿದೆಯೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಬೆಂಗಳೂರು, ಮುಂಬ್ಯೆ, ಅವಿಭಜಿತ ದ.ಕ.ಜಿಲ್ಲೆ, ಕೊಪ್ಪ , ಚಿಕ್ಕಮಗಳೂರು ಸೇರಿದಂತೆ ಸಮಾಜದ ಸುಮಾರು ನೂರು ಮಂದಿ ಪತ್ರಕರ್ತರನ್ನು ಗೌರವಿಸಲಾಯಿತು. ಮುಂಬೈ ಬಿಲ್ಲವರ ಅಸೋಸಿಯೇಶನ್ ನ ಅಧ್ಯಕ್ಷ ಹರೀಶ್ ಜಿ ಅಮೀನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ರಾಷ್ತ್ರೀಯ ಬಿಲ್ಲವರ ಮಹಾ ಮಂಡಲದ ಉಪಾಧ್ಯಕ್ಷ ಚಂದ್ರಶೇಖರ ಸುವರ್ಣ ಮಂಗಳೂರು, ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ ಕುಬೆವೂರು, ಕೋಶಾಧಿಕಾರಿ ಯೋಗೀಶ್ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
01/03/2021 09:23 am