ಮುಲ್ಕಿ: ಇತಿಹಾಸ ಪ್ರಸಿದ್ಧ ಮುಲ್ಕಿ ಸೀಮೆಯ ಒಂಬತ್ತು ಮಾಗಣೆಯ ಶಿಮಂತೂರು ಶ್ರೀ ಆದಿ ಜನಾರ್ಧನ ದೇವಸ್ಥಾನದ ಜಾತ್ರಾ ಮಹೋತ್ಸವ ಫೆ. 26 ರಿಂದ ಆರಂಭವಾಗಲಿದ್ದು, ಪೂರ್ವಭಾವಿಯಾಗಿ ಪರೆಂಕಿಲ ಶ್ರೀ ರಕ್ತೇಶ್ವರಿ ಗುಡಿಯಿಂದ ಶಿಮಂತೂರು ಶ್ರೀ ಆದಿ ಜನಾರ್ಧನ ದೇವಸ್ಥಾನಕ್ಕೆ ಹೊರೆಕಾಣಿಕೆ ಮೆರವಣಿಗೆ ನಡೆಯಿತು.
ಈ ಸಂದರ್ಭ ದೇವಳದ ತಂತ್ರಿಗಳಾದ ವೇದವ್ಯಾಸ ತಂತ್ರಿ ಮಾತನಾಡಿ, ಅನನ್ಯ ಭಕ್ತಿಯಿಂದ ದೇವರನ್ನು ಆರಾಧಿಸಿ, ಲೋಕಕ್ಕೆ ಬಂದಿರುವ ಕೊರೊನಾ ಕಂಟಕವನ್ನು ದೂರ ಮಾಡೋಣ ಎಂದು ವಿಶೇಷವಾಗಿ ಪ್ರಾರ್ಥಿಸಿದರು.
ಬಳಿಕ ತೋರಣ ಮುಹೂರ್ತ, ಅಂಕುರಾರೋಹಣ, ಭೂತ ಬಲಿ, ರಂಗಪೂಜೆ ನಡೆಯಿತು. ಮಧ್ಯಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆ ಜರುಗಿತು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಹಾಸ ಎನ್.ಶೆಟ್ಟಿ ಮಾತನಾಡಿ, ಫೆ. 26ರಂದು ಹಗಲು ಧ್ವಜಾರೋಹಣ, ರಾತ್ರಿ ಉತ್ಸವ ಬಲಿ ನಡೆಯಲಿದೆ ಎಂದರು.
ತಾಪಂ ಸದಸ್ಯ ಶರತ್ ಕುಬೆವೂರು, ಅತಿಕಾರಿಬೆಟ್ಟು ಪಂ. ಅಧ್ಯಕ್ಷ ಮನೋಹರ ಕೋಟ್ಯಾನ್, ಸದಸ್ಯರಾದ ಪದ್ಮಿನಿ ಶೆಟ್ಟಿ, ಕಿಲ್ಪಾಡಿ ಗ್ರಾಪಂ ಸದಸ್ಯೆ ಮಮತಾ ಶೆಟ್ಟಿ, ಮುಲ್ಕಿ ಠಾಣೆ ಎಎಸ್ಸೈ ಚಂದ್ರಶೇಖರ್, ಉದಯಕುಮಾರ್ ಶೆಟ್ಟಿ ಅದಿಧನ್ ಹಾಗೂ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಸಸಿಹಿತ್ಲು ಶ್ರೀ ಭಗವತಿ ಪ್ರಸಾದಿತ ಯಕ್ಷಗಾನ ಮಂಡಳಿಯಿಂದ 'ರಂಗಸ್ಥಳ' ಎಂಬ ಯಕ್ಷಗಾನ ಬಯಲಾಟ ನಡೆಯಿತು.
Kshetra Samachara
25/02/2021 10:15 pm