ಬಂಟ್ವಾಳ: ಯುವಜನಾಂಗ ಅಕ್ರಮ, ಅನೈತಿಕ, ಅನ್ಯಾಯ, ಧರ್ಮ ವಿರೋಧಿ ಹಾಗೂ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗುವುದನ್ನು ತಡೆಗಟ್ಟಲು ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾ ಕರ್ನಾಟಕ ಮುಶಾವರದಿಂದ ಫೆಬ್ರವರಿ 16ರಿಂದ ಏಪ್ರಿಲ್ 30ರ ವರೆಗೆ 'ಆದರ್ಶ ಪ್ರಬುದ್ಧತೆ, ಆಧ್ಯಾತ್ಮಿಕ ಪ್ರಭೆ' ಎಂಬ ಧ್ಯೇಯ ವಾಕ್ಯದೊಂದಿಗೆ ವಿವಿಧ ಜನಜಾಗೃತಿ ಕಾರ್ಯಕ್ರಮಗಳನ್ನು ರಾಜ್ಯಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದು ಕೆ.ಐ.ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ ಹೇಳಿದರು.
ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಶನಿವಾರ ಸಂಜೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ಉದ್ಘಾಟನೆ ಫೆ.16ರಂದು ಸಂಜೆ 4 ಗಂಟೆಗೆ ಮಿತ್ತಬೈಲ್ ಜುಮಾ ಮಸೀದಿಯ ವಠಾರದಲ್ಲಿ ನಡೆಯಲಿದ್ದು, ಸಮಸ್ತ ಕೇಂದ್ರ ಮುಶಾವರದ ಅಧ್ಯಕ್ಷ ಸೈಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ನೇತೃತ್ವ ವಹಿಸಲಿದ್ದಾರೆ. ಖ್ಯಾತ ವಾಗ್ಮಿ ಅಲವಿ ದಾರಿಮಿ ಕುಝಿಮಣ್ಣ ಸಂದೇಶ ಭಾಷಣ ಮಾಡಲಿದ್ದಾರೆ ಎಂದರು.
ಅಭಿಯಾನದ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಏಳು ವಲಯಗಳಲ್ಲಿ ಮೊಹಲ್ಲಾ ಮುಲಾಖಾತ್, ಯುವಪೀಳಿಗೆ ಕೆಟ್ಟ ಚಟುವಟಿಕೆಗಳಿಂದ ಮುಕ್ತಿ ಹೊಂದುವಂತಾಗಲು ತಝ್ಕಿಯತ್ ಕ್ಯಾಂಪ್, ವ್ಯಕ್ತಿತ್ವ ವಿಕಸನ ಶಿಬಿರ, ಲೀಡರ್ಸ್ ಮೀಟ್ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಹಲವರು ವಾಗ್ಮಿಗಳು ಭಾಷಣ ಮಾಡಲಿದ್ದು, ರಾಜ್ಯದ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಸಾಮಾಜಿಕ, ಧಾರ್ಮಿಕ ನೇತಾರರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾ ಸಂಘಟನೆ ಈ ಹಿಂದೆಯೂ ಇಂತಹ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು, ಈ ಕಾರ್ಯಕ್ರಮ ಮತ್ತಷ್ಟು ಪರಿಣಾಮಕಾರಿಯಾಗಿ ಮುಂದುವರಿಸಲು ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ. 15 ದಿನಗಳ ಈ ಅಭಿಯಾನದಲ್ಲಿ ಸಮುದಾಯದ ಜನರಿಂದ ಸಂಗ್ರಹವಾಗುವ ಸಲಹೆ, ಸೂಚನೆ ಪಡೆದು ಮುಂದಿನ ಕಾರ್ಯಕ್ರಮದ ರೂಪುರೇಷೆ ನಡೆಸಲಾಗುವುದು. ಈ ಮೂಲಕ ಸಮಾಜದಲ್ಲಿ ಮಾದಕ ದ್ರವ್ಯ ಸಹಿತ ಅನೈತಿಕ, ಅನ್ಯಾಯ, ಧರ್ಮ ವಿರೋಧಿ ಹಾಗೂ ಕಾನೂನು ಬಾಹಿರ ಚಟುವಟಿಕೆಗಳು ಯುವ ಜನಾಂಗದಿಂದ ನಿರ್ಮೂಲನೆಗಾಗಿ ಪ್ರಯತ್ನಿಸಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕೆ.ಎಲ್.ಉಮರ್ ದಾರಿಮಿ ಪಟ್ಟೋರಿ, ಅಬೂಬಕ್ಕರ್ ಸಿದ್ದೀಕ್ ದಾರಿಮಿ ಕಡಬ, ಕೆ.ಬಿ.ಅಬ್ದುಲ್ ಖಾದಿರ್ ದಾರಿಮಿ ಕೊಡುಂಗಾಯಿ, ಕೆ.ಎಂ.ಖಾಸಿಂ ದಾರಿಮಿ ತೋಡಾರು, ಎಸ್.ಐ.ಹನೀಫ್ ದಾರಿಮಿ ಸವಣೂರು ಉಪಸ್ಥಿತರಿದ್ದರು.
Kshetra Samachara
14/02/2021 11:21 am