ಮಂಗಳೂರು: ಕೋವಿಡ್ ನಿಯಮಾವಳಿ ನಡುವೆಯೇ ಕರಾವಳಿಯಲ್ಲಿ ಕಂಬಳ ಕ್ರೀಡೋತ್ಸವ ಅದ್ಧೂರಿಯಾಗಿ ನಡೆಯುತ್ತಿದೆ.
ಮಂಗಳೂರು ನಗರ ಹೊರವಲಯದ ಐಕಳದಲ್ಲಿ ಈ ಋತುವಿನ ಎರಡನೇ ಕಂಬಳ ವಿಜೃಂಭಣೆಯಿಂದ ಜರುಗಿದ್ದು, ಸಾವಿರಾರು ಕಂಬಳ ಅಭಿಮಾನಿಗಳು ನೋಡಿ, ಖುಷಿ ಪಟ್ಟರು.
ಐಕಳ ಕಂಬಳ ಕೂಟದಲ್ಲಿ ಕಂಬಳ ಇತಿಹಾಸದ ದಾಖಲೆಗಳ ಸರದಾರ ಖ್ಯಾತಿಯ 'ಚೆನ್ನ' ಎಂಬ ಮಿಂಚಿನ ವೇಗದ ಚೆಲುವ ಕೋಣವನ್ನು ಹೃದಯಸ್ಪರ್ಶಿಯಾಗಿ ಸನ್ಮಾನಿಸಲಾಯಿತು.
ಬರೋಬ್ಬರಿ 164 ಚಿನ್ನದ ಪದಕಗಳನ್ನು ಗೆದ್ದ ಹಿರಿಮೆಯ ಕೊಳಚ್ಚೂರು ಕೊಂಡೊಟ್ಟು ಸುಕುಮಾರ ಶೆಟ್ಟಿ ಎಂಬವರಿಗೆ ಸೇರಿದ ಕೋಣ ಇದಾಗಿದ್ದು, ಸಹಸ್ರಾರು ಅಭಿಮಾನಿಗಳ ಹರ್ಷೋದ್ಗಾರದ ಮಧ್ಯೆ ಸನ್ಮಾನಿಸಿ ಗೌರವಿಸಲಾಯಿತು.
ಅತ್ಯಾಕರ್ಷಕ ಮೈಕಟ್ಟು, ಚುರುಕಿನ ಗ್ರಹಿಕೆ, ಉದ್ದನೆಯ ಕೋಡು, ಚಿಗರೆಯಂತಹ ಓಟದಿಂದಲೇ ಸಾವಿರಾರು ಅಭಿಮಾನಿಗಳನ್ನು ಸಂಪಾದಿಸಿದ್ದ ಈ ಚೆನ್ನ!
ಕನೆಹಲಗೆ, ಅಡ್ಡಹಲಗೆ, ನೇಗಿಲು ಕಿರಿಯ, ನೇಗಿಲು ಹಿರಿಯ, ಹಗ್ಗ ಕಿರಿಯ, ಹಗ್ಗ ಹಿರಿಯ ಎಂಬ ವಿಭಾಗಗಳಲ್ಲಿ ಕಂಬಳ ಸೆಣಸಾಟ ಜರುಗಿದ್ದು, ಕೊರೊನಾ ಹಾವಳಿ, ಆತಂಕದ ನಡುವೆಯೂ ಇನ್ನೂರಕ್ಕೂ ಅಧಿಕ ಜೊತೆ ಕೋಣಗಳು ಈ ಕಂಬಳ ಕ್ರೀಡಾ ಹಬ್ಬದಲ್ಲಿ ಪಾಲ್ಗೊಂಡಿದ್ದವು.
ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಅವರು ಕೂಡ ಕುಟುಂಬ ಸಮೇತರಾಗಿ ಆಗಮಿಸಿ, ಸಾಮಾನ್ಯ ಪ್ರೇಕ್ಷಕನಂತೆ ಕಂಬಳ ಓಟದ ರೋಚಕತೆಯ ಮೋಡಿ ನೋಡಿ ಸಂಭ್ರಮಪಟ್ಟು, ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು.
Kshetra Samachara
07/02/2021 12:34 pm