ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳ್ತಂಗಡಿ: 'ಭಕ್ತಿಲೋಕದ ಐಸಿರಿ' ಸಿರಿ ಜಾತ್ರೋತ್ಸವ ತಾಣ ಮರೋಡಿ ಶ್ರೀ ಉಮಾಮಹೇಶ್ವರ ಸನ್ನಿಧಿ

ಬೆಳ್ತಂಗಡಿ: ಆ ಪುಣ್ಯ ತಾಣಕ್ಕೆ ಭೇಟಿ ನೀಡಿದರೆ ಅಪರೂಪದ ದೃಶ್ಯವೇ ಕಣ್ಣ ಮುಂದೆ ನಿಲ್ಲುತ್ತದೆ! ಸಾಲು ಸಾಲಾಗಿ ಶಿಸ್ತಿನಿಂದ ನಿಂತು, ಹೊಂಬಾಳೆ ಹಿಡಿದಿದ್ದ ಆ ದೇವತಾ ರೂಪಿಯಂತಿದ್ದ ಮಹಿಳೆಯರನ್ನು ನೋಡಿದ್ರೆ ತನುಮನದಲ್ಲಿ ಭಯಭಕ್ತಿ ತನ್ನಿಂದ ತಾನೇ ಸ್ಫುರಿಸುತ್ತದೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಆಲಡೆ ಕ್ಷೇತ್ರ ಮರೋಡಿ ಶ್ರಿ ಉಮಾಮಹೇಶ್ವರ ದೇವಸ್ಥಾನದ ವರ್ಷಾವಧಿ‌ ಉತ್ಸವ ಪ್ರಯುಕ್ತ ಆಯನ ಮತ್ತು ಸಿರಿಗಳ ಜಾತ್ರೆ ಭಕ್ತಿ- ಸಂಭ್ರಮದಿಂದ ನಡೆಯಿತು.

ಹೆಂಗಳೆಯರು ಸಾಲಾಗಿ ನಿಂತು ತಮ್ಮ ತಮ್ಮ ಕೈಯಲ್ಲಿ ಅಡಕೆ ಮರದ ಹಿಂಗಾರವನ್ನು ಹಿಡಿದಿದ್ದರು. ಅವರೆಲ್ಲರೂ ಸಾಮೂಹಿಕವಾಗಿ ಮೈಮೇಲೆ ದೈವವನ್ನು ಆವಾಹಿಸಿಕೊಂಡಿದ್ದರು. ಮಹಿಳೆಯರು‌- ಯುವತಿಯರನ್ನು ‘ಸಿರಿ’ಗಳೆಂದೂ, ಯುವಕರನ್ನು ‘ಕುಮಾರ’ ಎಂದು ಕರೆಯಲಾಗುತ್ತದೆ.

ಅಂದ ಹಾಗೇ, ತುಳುನಾಡಿನ ವಿಶಿಷ್ಟ ಆಚರಣೆಗಳಲ್ಲಿ ಸಿರಿ ಜಾತ್ರೆಯೂ ಕೂಡ ಒಂದು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಈ ವಿಶೇಷ ಆರಾಧನೆಯನ್ನು ಹೆಚ್ಚಾಗಿ ಆಚರಿಸಲಾಗುತ್ತದೆ. ತುಳುನಾಡಿನಲ್ಲಿ ಸುಮಾರು ಎಂಭತ್ತಕ್ಕೂ ಹೆಚ್ಚು ಸಿರಿ ಆಲಡೆಗಳಿವೆ ಎನ್ನುವುದು ಒಂದು ಅಂದಾಜು. ಇದರಲ್ಲಿ ಮರೋಡಿ ಶ್ರೀ ಉಮಾಮಹೇಶ್ವರ ಕೂಡ ಒಂದು. ಇಲ್ಲಿ ಕೂಡ ಸಿರಿ- ಕುಮಾರರಿರುತ್ತಾರೆ. ಸಿರಿ ಮತ್ತು ಕುಮಾರ ಸಹೋದರಿ-ಸಹೋದರರು.

ಮನೆಯಲ್ಲಿ ಕಷ್ಟ ಬಂದಾಗ, ಸಹಿಸಲಾಗದಂತಹ ಸಂಕಟ ಬಂದಾಗ, ಸಂತಾನ ಭಾಗ್ಯವಿಲ್ಲದಿದ್ದಾಗ ಹರಕೆ ಹೇಳುವ ಕ್ರಮವಿದೆ. ಸಿರಿ ಜಾತ್ರೆಗೆ ಬಂದು ಸಿರಿಯಾಗಿ, ಕುಮಾರನಾಗಿ ದೇವರ ಸನ್ನಿಧಿಯಲ್ಲಿ ಹರಕೆ ತೀರಿಸುವುದಾಗಿ ಹೇಳಿಕೊಂಡಿರುತ್ತಾರೆ. ಹೀಗೆ ಹರಕೆ ಹೇಳಿಕೊಂಡರೆ ಫಲ ಸಿಗುತ್ತದೆ ಎನ್ನುವುದು ಬಲವಾದ ನಂಬಿಕೆ. ಈ ರೀತಿಯಾಗಿ ಹರಕೆ ಹೇಳಿಕೊಂಡವರು ತಮ್ಮ ಮನೆ ಮಂದಿಯ ಜೊತೆ ಬಂದು ಸಿರಿಜಾತ್ರೆಯಲ್ಲಿ ಹರಕೆ ಸಲ್ಲಿಸಿ, ಧನ್ಯರಾಗುತ್ತಾರೆ.

Edited By : Manjunath H D
Kshetra Samachara

Kshetra Samachara

01/02/2021 04:09 pm

Cinque Terre

19.42 K

Cinque Terre

0