ಉಡುಪಿ: ಉಡುಪಿಯ ಖ್ಯಾತ ಪತ್ರಕರ್ತ ಎ.ಈಶ್ವರಯ್ಯ ಅವರ ಸಂಸ್ಮರಣೆ ಗ್ರಂಥ ‘ಈಶ್ವರಾರ್ಪಣ' ವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮಿ ಸನ್ನಿಧಾನದಲ್ಲಿ, ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿದರು.
ಈ ವೇಳೆ ಮಾತನಾಡಿದ ಅವರು, ಈಶ್ವರಯ್ಯನವರು ಮಹಾ ಸಾತ್ವಿಕ ಮತ್ತು ವಿದ್ವಾಂಸ. ಸಂಗೀತ, ಯಕ್ಷಗಾನ, ಛಾಯಾಚಿತ್ರಗ್ರಹಣ, ಆಧುನಿಕ ವಿಜ್ಞಾನ, ತಾಂತ್ರಿಕತೆ ಮೊದಲಾದ ಹಲವಾರು ಕಲಾಪ್ರಕಾರಗಳಲ್ಲಿ ಅಪಾರ ಜ್ಞಾನ ಹೊಂದಿದ್ದರು. ಧರ್ಮಸ್ಥಳ ಕ್ಷೇತ್ರದ ಮಂಜೂಷಾ ವಸ್ತು ಸಂಗ್ರಹಾಲಯದಲ್ಲಿರುವ ಕ್ಯಾಮೆರಾಗಳ ಬಗ್ಗೆ ಕರಾರುವಾಕ್ಕಾದ ಮಾಹಿತಿ ಒದಗಿಸಿಕೊಟ್ಟಿದ್ದರು. ಸಮಾಜ ಯಾವತ್ತೂ ಅವರನ್ನು ಮರೆಯಬಾರದು. ಅವರ ಸಾಮರ್ಥ್ಯ ಬಿಂಬಿಸುವ ನಿಟ್ಟಿನಲ್ಲಿ ಈ ಪುಸ್ತಕ ಉತ್ತಮ ದಾಖಲೆಯಾಗಲಿದೆ ಎಂದರು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಾಂಸ್ಕೃತಿಕ ಚಟುವಟಿಕೆಗಳಿಗೆ ಹರಿಕಾರರಾಗಿ ದುಡಿದಿದ್ದ ಖ್ಯಾತ ವಿಮರ್ಶಕ ಎ. ಈಶ್ವರಯ್ಯನವರ ಸಂಸ್ಮರಣ ಗ್ರಂಥದ ಕುರಿತಾಗಿ ಪುಸ್ತಕದ ಸಂಪಾದಕ ಪ್ರೊ. ಅರವಿಂದ ಹೆಬ್ಬಾರ್ ವಿವರ ನೀಡಿದರು. ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಪುಸ್ತಕದ ಮುದ್ರಣಕ್ಕೆ ನೆರವಾದ ರಾಧಿಕಾ ಶಂಕರನಾರಾಯಣ ದಂಪತಿಯನ್ನು ಸನ್ಮಾನಿಸಿದರು.
ಉಡುಪಿಯ ರಾಗಧನದ ಅಧ್ಯಕ್ಷ ಡಾ. ಕಿರಣ್ ಹೆಬ್ಬಾರ್, ಕಾರ್ಯದರ್ಶಿ ಉಮಾ ಶಂಕರಿ, ಕೋಶಾಧಿಕಾರಿ ಪ್ರೊ. ಕೆ. ಸದಾಶಿವ ರಾವ್, ಮಂಗಳೂರಿನ ಮಣಿಕೃಷ್ಣಸ್ವಾಮಿ ಅಕಾಡೆಮಿಯ ಪಿ.ನಿತ್ಯಾನಂದ ರಾವ್ ಮತ್ತು ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಬಿ. ಸೀತಾರಾಮ ತೋಳ್ಪಾಡಿತ್ತಾಯ, ಹೆಗ್ಗಡೆ ಅವರ ಆಪ್ತ ಕಾರ್ಯದರ್ಶಿ ಎ.ವಿ.ಶೆಟ್ಟಿ ಉಪಸ್ಥಿತರಿದ್ದರು. ಸಮನ್ವಿ ಪ್ರಾರ್ಥನಾ ಗೀತೆ ಹಾಡಿದರು.
Kshetra Samachara
20/01/2021 03:55 pm