ವರದಿ: ರಹೀಂ ಉಜಿರೆ
ಉಡುಪಿ ; ಉಡುಪಿಯ ಕೃಷ್ಣಾಪುರ ಮಠದ ಪರ್ಯಾಯ ಮಹೋತ್ಸವ ಮುಂದಿನ ತಿಂಗಳು ನಡೆಯಲಿದೆ. ಪರ್ಯಾಯದ ಪೂರ್ವ ಬಾವಿಯಾಗಿ ವಿವಿಧ ಮುಹೂರ್ತಗಳು ನಡೆಯುವುದು ಕೃಷ್ಣಮಠದ ವಿಶೇಷ ಸಂಪ್ರದಾಯ. ಅನ್ನ ಬ್ರಹ್ಮನ ಕ್ಷೇತ್ರದಲ್ಲಿ ಅನ್ನ ಪ್ರಸಾದಕ್ಕೆ ತೊಂದರೆ ಬಾರದೇ ಇರಲಿ ಎಂದು ಭತ್ತ ದಾಸ್ತಾನು ಇಡುವ ವಿಶೇಷ ಆಚರಣೆ ಈಗಲೂ ಮಠದಲ್ಲಿದೆ.
ಪೊಡವಿಗೊಡೆಯ ಕೃಷ್ಣನೂರಿನ ಕೃಷ್ಣಮಠ ವಿಶೇಷ ಸಂಪ್ರದಾಯ, ಆಚರಣೆಗಳಿಗೆ ಹೆಸರುವಾಸಿ. ಇಲ್ಲಿನ ಅಷ್ಟಮಠಗಳ ನಡುವೆ ನಡೆಯುವ ಪರ್ಯಾಯ ಮಹೋತ್ಸವ ಅಂದರೆ ರಾಜ್ಯಕ್ಕೇ ದೊಡ್ಡ ಹಬ್ಬ. ಸದ್ಯ ಉಡುಪಿ ಕೃಷ್ಣ ಮಠದಲ್ಲಿ ಅದಮಾರು ಮಠದ ಪರ್ಯಾಯ ಅವಧಿ ನಡೆಯುತ್ತಿದ್ದು, ಮುಂದಿನ ಜನವರಿಯಲ್ಲಿ ಕೃಷ್ಣಾಪುರ ಮಠದ ಪರಮಪೂಜ್ಯ ಶ್ರೀ ವಿದ್ಯಾಸಾಗರ ತೀರ್ಥರ ಪರ್ಯಾಯ ಮಹೋತ್ಸವ ನಡೆಲಿದೆ. ಪರ್ಯಾಯ ಆರಂಭಕ್ಕೂ ಮುನ್ನ ಕೆಲವೊಂದು ಸಂಪ್ರದಾಯಗಳು ನಡೆಯಲಿದ್ದು, ಈಗಾಗಲೇ ಬಾಳೆ ಮುಹೂರ್ತ, ಕಟ್ಟಿಗೆ ಮುಹೂರ್ತ ನಡೆದಿದ್ದು ಇಂದು ಭತ್ತ ಮುಹೂರ್ತ ನಡೆಯಿತು.ಎರಡು ವರ್ಷದ ಪರ್ಯಾಯದ ಅವಧಿಯಲ್ಲಿ ಅನ್ನ ಪ್ರಸಾದಕ್ಕೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಮುಂಚಿತವಾಗಿ ಭತ್ತವನ್ನು ದಾಸ್ತಾನಿಟ್ಟುಕೊಳ್ಳುವ ಸಂಪ್ರದಾಯ ನೂರಾರು ವರ್ಷಗಳಿಂದ ಅಷ್ಠಮಠಗಳಲ್ಲಿ ಇದೆ. ವಾದಿರಾಜರು ಹಾಕಿಕೊಟ್ಟ ಈ ಸಂಪ್ರದಾಯವನ್ನು ಎಲ್ಲ ಮಠಗಳೂ ತಪ್ಪದೆ ಪಾಲಿಸಿಕೊಂಡು ಬರುತ್ತಿವೆ. ಭತ್ತದ ಮುಡಿಗಳನ್ನು ಹೊತ್ತು ರಥ ಬೀದಿಗೆ ಸುತ್ತು ಬಂದು, ಮಠದ ಬಡಗು ಮಾಳಿಗೆಯ ಉಗ್ರಾಣದಲ್ಲಿ ಇಟ್ಟು ಪೂಜೆ ನೆರವೇರಿಸುವ ಮೂಲಕ ಭತ್ತ ಮುಹೂರ್ತ ನೆರವೇರಿತು.
ಜುಲೈ 11 ರಂದು ಕಟ್ಟಿಗೆ ಮುಹೂರ್ತ ನಡೆದು, ಸದ್ಯ ಸುಂದರವಾದ ಕಟ್ಟಿಗೆಯ ರಥ ನಿರ್ಮಿಸಲಾಗಿದೆ. ಭತ್ತ ಮುಹೂರ್ತದ ಜತೆಗೆ ಕಟ್ಟಿಗೆ ರಥಕ್ಕೂ ಶಿಖರ ಪ್ರತಿಷ್ಠಾಪನೆ ಕಾರ್ಯ ನಡೆಯಿತು. ಮುಂದಿನ ದಿನಗಳಲ್ಲಿ ಭಕ್ತರು ಪರ್ಯಾಯ ಮಹೋತ್ಸವಕ್ಕಾಗಿ ಹೊರೆ ಕಾಣಿ ಸಮರ್ಪಿಸಲಿದ್ದಾರೆ.
ಪರ್ಯಾಯ ಪೀಠ ಏರಲಿರುವ ಕೃಷ್ಣಾಪುರ ಮಠದ ಪರಮಪೂಜ್ಯ ಶ್ರೀ ವಿದ್ಯಾಸಾಗರ ತೀರ್ಥರು ಸದ್ಯ ವಿವಿಧ ತೀರ್ಥ ಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದಾರೆ. ಶ್ರೀಗಳ ಪುರ ಪ್ರವೇಶ ಈ ವಾರದಲ್ಲಿ ನಡೆಯಲಿದ್ದು, ಜನವರಿಯಲ್ಲಿ ಪರ್ಯಾಯ ಸಂಭ್ರಮ ಕಳೆಗಟ್ಟಲಿದೆ.
Kshetra Samachara
08/12/2021 09:02 pm