ಮುಲ್ಕಿ: ಕಂಬಳ ನಮ್ಮ ಕೃಷಿ ಮತ್ತು ಸಾಂಸ್ಕೃತಿಕ ಬದುಕಿನ ಅವಿಭಾಜ್ಯ ಅಂಗ. ಕಂಬಳದಿಂದ ನಮ್ಮ ಸಂಸ್ಕೃತಿ ಉಳಿಯುವುದರ ಜತೆಗೆ ಪ್ರಾಣಿ ಪ್ರೀತಿಯೂ ಹೆಚ್ಚಾಗುತ್ತದೆ. ಕೋಣಗಳ ಬಗ್ಗೆ ಜನರಲ್ಲಿ, ಅದರಲ್ಲೂ ಮುಖ್ಯವಾಗಿ ಯುವ ಜನತೆಯಲ್ಲಿ ಪ್ರೀತಿ ಮೂಡಿಸುವ ಕೆಲಸವನ್ನು ಕಂಬಳ ಮಾಡುತ್ತದೆ. ಎಲ್ಲಾ ಆಚರಣೆಗಳನ್ನು ಕಳೆದುಕೊಳ್ಳುತ್ತಿರುವ ಈ ಹೊತ್ತಿನಲ್ಲಿ ಇಂಥ ಸಂಸ್ಕೃತಿ, ಪ್ರೀತಿ ಮೂಡಿಸುವ ಆಚರಣೆಗಳ ಅನಿವಾರ್ಯತೆ ಇದೆ ಎಂದು ಧಾರ್ಮಿಕ ಗುರು, ಅಂತಾರಾಷ್ಟ್ರೀಯ ವಾಸ್ತುತಜ್ಞ, ವೈಜ್ಞಾನಿಕ ಜ್ಯೋತಿಷಿ ಶ್ರೀಶ್ರೀಚಂದ್ರಶೇಖರ ಸ್ವಾಮೀಜಿ ಹೇಳಿದರು.
ವಿಶಿಷ್ಟ ಹಾಗೂ ವೈಭೋವೋಪೇತ ಧಾರ್ಮಿಕ ಹಿನ್ನಲೆಯುಳ್ಳ, ತುಳುನಾಡ ಕಾರಣಿಕ ಪುರುಷರಾದ ಐಕಳಬಾವ "ಕಾಂತಾಬಾರೆ-ಬೂದಾಬಾರೆ’ ನಾಮಾಂಕಿತ, ಇತಿಹಾಸ ಪ್ರಸಿದ್ಧ ಕಂಬಳಕ್ಕೆ ಚಾಲನೆ ನೀಡಿದ ಬಳಿಕ ಅವರು ಮಾತನಾಡುತ್ತಿದ್ದರು.ಕಂಬಳ ಎಂಬುದು ಕರಾವಳಿ ಮಣ್ಣಿನ ಅಭಿಮಾನದ ಪ್ರತೀಕವಾದ ಜಾನಪದ ಕ್ರೀಡೆ. ಕಂಬಳ ಸ್ಪರ್ಧೆ ನೆಲೆಯಲ್ಲಿ ಎತ್ತು, ಕೋಣಗಳ ಪೋಷಣೆ ಚೆನ್ನಾಗಿ ನಡೆದರೆ ಅದು ಕೃಷಿ ಉಳಿಕೆಗೂ ಪೂರಕವಾಗಲಿದೆ. ಆಧುನಿಕ ಬದುಕಿನಿಂದಾಗಿ ಕೃಷಿ ಕುಂಠಿತವಾಗಿದ್ದು ಕಂಬಳವೂ ನಿಂತರೆ ಕೃಷಿ ಮತ್ತಷ್ಟು ಅವನತಿಯ ವೇಗ ಪಡೆಯಲಿದೆ. ಕಂಬಳದ ಜತೆಗೆ ಕರಾವಳಿಗರಿಗೆ ಭಾವನಾತ್ಮಕ ಸಂಬಂಧವಿದ್ದು ಕ್ರಿಕೆಟ್‌ನಂತೆ ಜಾನಪದ ಕ್ರೀಡೆ ಕಂಬಳವನ್ನೂ ಸ್ಪರ್ಧಾ ಮನೋಭಾವದಿಂದಲೂ ನೋಡುತ್ತಾರೆ. ಶತಮಾನಗಳಿಂದ, ಪರಂಪರೆಯಿಂದ ಅಭಿಮಾನ ಹರಿದುಬಂದಿದೆ ಎಂದರು.
ಕಂಬಳ ಬರೀ ಕರಾವಳಿಗೆ ಸೀಮಿತವಾಗಬಾರದು. ನಮ್ಮ ಅಸ್ಮಿತೆ ಉಳಿವಿಗಾಗಿ ಪಣ ತೊಡಬೇಕು. ರಾಜ್ಯ ಪ್ರವಾಸೋದ್ಯಮ ನಕ್ಷೆಯಲ್ಲಿ ಕಂಬಳ ಕಂಗೊಳಿಸಬೇಕು. ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ ಎಂಬುದನ್ನು ಭಾಷಣಕ್ಕೆ ಸೀಮಿತವಾಗಿಸದೆ ಅವುಗಳನ್ನು ಅನುಷ್ಠಾನ ಮಾಡುವ ಮೂಲಕ ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸವನ್ನು ಐಕಳಬಾವ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ಮಾಡುತ್ತಿದ್ದಾರೆ. ಇವರ ಕೆಲಸ ಶ್ಲಾಘನೀಯ ಎಂದರು.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಜೋಡಿ ಕೆರೆಗೆ ಪ್ರಸಾದ ಹಾಕುವ ಮೂಲಕ ಕಂಬಳಕ್ಕೆ ಚಾಲನೆ ನೀಡಿದರು. ಏಳಿಂಜೆ ದೇವಳದ ಅರ್ಚಕರಾದ ಗಣೇಶ್ ಭಟ್ ಮತ್ತು ವರುಣ್ ಭಟ್ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಐಕಳಬಾವ ದೇವಿಪ್ರಸಾದ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮಾಜೀ ಸಚಿವ ಅಭಯಚಂದ್ರ ಜೈನ್, ದ.ಕ. ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಹರಿಕೃಷ್ಣ ಪುನರೂರು ,ಭುವನಾಭಿರಾಮ ಉಡುಪ,ಶಾರದಮ್ಮ,ರಜನಿ ಚಂದ್ರಶೇಖರ ಭಟ್, ರೋಶನಿ ಭಟ್,ಅದಾನಿ ಫೌಂಡೇಶನ್ ಅಧ್ಯಕ್ಷ ಕಿಶೋರ್ ಆಳ್ವ,ಮುಲ್ಕಿ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಹೆಗ್ದೆ, ಅವಿಭಾಜಿತ ದ.ಕ. ಹಾಗೂ ಉಡುಪಿ ಜಿಲ್ಲೆಯ ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷರಾದ ಮಧು ಆಚಾರ್ಯ ಕಂಬಳ ಸಮಿತಿಯ ಕಾರ್ಯದರ್ಶಿ ಚಿತ್ತರಂಜನ್ ಭಂಡಾರಿ, ಸಂಚಾಲಕ ಮುರಳೀಧರ ಶೆಟ್ಟಿ, ಕೃಷ್ಣ ಮಾರ್ಲ, ಯೋಗೀಶ್ ರಾವ್, ಶ್ರೀಶ ಐಕಳ,ತಾರಾನಾಥ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸಾಧಕರ ನೆಲೆಯಲ್ಲಿ ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ದಂಪತಿ, ಜಿಪಂ ಸದಸ್ಯ ವಿನೋದ್ ಬೊಳ್ಳೂರು, ಗೋಪಾಲಕೃಷ್ಣ ಪ್ರಭು ಖಂಡಿಗೆ, ದಯೇಶ್ ಐಕಳ, ದಿವಾಕರ ಚೌಟ ಐಕಳ, ಅನಿತಾ ಡಿಕೋಸ್ಟಾ ಮತ್ತಿತರರನ್ನು ಗೌರವಿಸಲಾಯಿತು. ಐಕಳಬಾವ ತಶ್ಮಿ ಹರ್ಷಿತ್ ಶೆಟ್ಟಿಯವರ ಕಂಬಳ ಪೈಂಟಿಂಗ್ ಕಲಾಕೃತಿಯನ್ನು ಶ್ರೀ ಶ್ರೀ ಚಂದ್ರಶೇಖರ ಸ್ವಾಮೀಜಿ ಬಿಡುಗಡೆಗೊಳಿಸಿದರು. ಕಂಬಳ ಸಮಿತಿಯ ಸಾಯಿನಾಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸುಮಾರು ಇನ್ನೂರಕ್ಕೂ ಮಿಕ್ಕಿ ಕೋಣಗಳು ಕಂಬಳದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಕಂಬಳ ಸಮಿತಿಯ ಸಂಚಾಲಕರ ಪ್ರಕಟಣೆತಿಳಿಸಿದೆ
Kshetra Samachara
06/02/2021 04:53 pm